ನಿದ್ರೆ ಬದುಕಿನ ಅವಿಭಾಜ್ಯ ಚಟುವಟಿಕೆ. ಸರಿಯಾದ ಸಮಯದಲ್ಲಿ ಮಲಗುವುದು ಮತ್ತು ಅಗತ್ಯವಿರುವಷ್ಟು ವಿಶ್ರಾಂತಿ ಪಡೆಯುವುದು ಆರೋಗ್ಯ ಸೂತ್ರಗಳಲ್ಲೊಂದು. ನಿದಿರೆಯೇ ಬರದೇ ಒದ್ದಾಡಿ ಅದಕ್ಕಾಗಿ ವೈದ್ಯರ ಮೊರೆ ಹೋಗುವ ಅನೇಕ ಜನರಿದ್ದಾರೆ.
ನಿದ್ರೆ ಬಹಳ ಮುಖ್ಯ. ಹಾಗಂತ ಹೆಚ್ಚು ಹೊತ್ತು ಮಲಗಿ, ತಡವಾಗಿ ಎದ್ದು ದಿನನಿತ್ಯದ ಚಟುವಟಿಕೆಗಳಿಗೆ ವಿಳಂಬವಾಗಬಾರದು ಎಂದು ನಿಗದಿತ ಸಮಯಕ್ಕೆ ಅಲಾರಾಂ ಇಟ್ಟುಕೊಳ್ಳುವ ಅಭ್ಯಾಸ ಅನೇಕರಿಗಿದೆ.
ಗಾಢ ನಿದ್ರೆಯಲ್ಲಿ ಇದ್ದಾಗ ಬಡಿಯುವ ಅಲಾರಾಂ ಶಬ್ಧ ಅನೇಕ ಸಲ ಕಿರಿಕಿರಿ ಉಂಟುಮಾಡುತ್ತದೆ. ಇಷ್ಟು ಬೇಗ ಅಲಾರಾಂ ಹೊಡೆಯಿತೆ ? ಇನ್ನೂ ಸ್ವಲ್ಪ ಮಲಗಬೇಕು ಎಂದೆನಿಸಿ ಅಲಾರಾಂ ಗಡಿಯಾರದ ತಲೆಗೆ ಮೊಟಕಿ ಮಲಗುವವರೇ ಹೆಚ್ಚು.
ಸಿಹಿಯಾದ ನಿದ್ರೆಯಿಂದ ನಮ್ಮನ್ನು ಎಬ್ಬಿಸುವ ಅಲಾರಾಂ ನಮ್ಮ ಬೆಳಗಿನ ಮೂಡ್ ಅನ್ನು ಹಾಳು ಮಾಡುವಂತೆ ಇರಬಾರದು. ಅದಕ್ಕೆ ಅಲಾರಾಂನಲ್ಲಿ ಅಳವಡಿಸುವ ಸಂಗೀತ ಹೆಚ್ಚು ಮಾಧುರ್ಯದಿಂದ ಕೂಡಿರಲಿ. ಹೆಚ್ಚು ಅಬ್ಬರವಿಲ್ಲದೆ, ಮೆಲು ದನಿಯಲ್ಲಿ ಮೊಳಗುವ ಸಂಗೀತ ನಿಮ್ಮ ಬೆಳಗಿನ ಪ್ರಾರಂಭಕ್ಕೆ ನಾಂದಿಯಾಗಲಿ. ಅಲಾರಾಂ ನಿಮ್ಮಲ್ಲಿ ಚೈತ್ಯನ, ಹುರುಪನ್ನು ಹೆಚ್ಚಿಸಿ ಉಲ್ಲಾಸಮಯವಾಗಿಸಲಿ.