ಮಾಂಸಹಾರ ಹಾಗೂ ಸಸ್ಯಹಾರ ಇದ್ರಲ್ಲಿ ಯಾವುದು ಒಳ್ಳೆಯದು ಎಂಬ ವಾದ-ವಿವಾದಗಳು ಈಗಿನದಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಅನೇಕರು ಮಾಂಸಹಾರ ತ್ಯಜಿಸಿದ್ದಾರೆ. ಇದ್ರಲ್ಲಿ ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿಯೂ ಒಂದು. ಇವರಿಬ್ಬರೂ ಸಸ್ಯ ಮಾಂಸದ ಬ್ರ್ಯಾಂಡ್ ಬ್ಲೂ ಟ್ರೈಬ್‌ನಲ್ಲಿ ಹೂಡಿಕೆ ಮಾಡಿದ್ದಾರೆ. ಈ ಬ್ರ್ಯಾಂಡ್ ತನ್ನ ಉತ್ಪನ್ನಗಳನ್ನು ದೆಹಲಿ ಮತ್ತು ಮುಂಬೈ ಸೇರಿದಂತೆ ಹಲವು ನಗರಗಳಲ್ಲಿ ಮಾರಾಟ ಮಾಡ್ತಿದೆ.
ಬ್ಲೂ ಟ್ರೈಬ್‌ನ ಸಂಸ್ಥಾಪಕ ಸಂದೀಪ್ ಸಿಂಗ್ ಮತ್ತು ನಿಕ್ಕಿ ಅರೋರಾ ಸಿಂಗ್, ಭಾರತೀಯ ಮಾರುಕಟ್ಟೆಯಲ್ಲಿ ಮಾಂಸ ಆಧಾರಿತ ಉತ್ಪನ್ನಗಳಿಗೆ ಪರ್ಯಾಯ ಆಹಾರ ನೀಡಿದ್ದಾರೆ. ಇದರ ಉತ್ಪನ್ನಗಳನ್ನು ಅವರೆಕಾಳು, ಸೋಯಾಬೀನ್, ಕಾಳುಗಳು, ಧಾನ್ಯಗಳು ಮತ್ತು ಇತರ ಪ್ರೋಟೀನ್-ಭರಿತ ಪದಾರ್ಥಗಳಿಂದ ತಯಾರಿಸಲಾಗುತ್ತದೆ.
ಸಸ್ಯ ಆಧಾರಿತ ಮಾಂಸ ಎಂದರೇನು ಎಂಬ ಪ್ರಶ್ನೆ ಬರುವುದು ಸಹಜ. ಇದು ಸಸ್ಯಗಳಿಂದ ತಯಾರಿಸಿದ ಮಾಂಸವಾಗಿದೆ. ಮಾಧ್ಯಮ ವರದಿಗಳ ಪ್ರಕಾರ, ಸಸ್ಯ ಮಾಂಸವನ್ನು ತಯಾರಿಸಲು ಪ್ರೋಟೀನ್, ಗ್ಲುಟನ್, ತೆಂಗಿನ ಎಣ್ಣೆ, ಮಸಾಲೆಗಳು, ಸೋಯಾ, ಬೀಟ್ ಜ್ಯೂಸ್, ಅಕ್ಕಿಯಂತಹ ವಸ್ತುಗಳನ್ನು ಬಳಸಲಾಗುತ್ತದೆ. ಸಸ್ಯ ಆಧಾರಿತ ಆಹಾರ ಸೇವನೆಯಿಂದ ಆರೋಗ್ಯ ವೃದ್ಧಿ ಜೊತೆ ಪರಿಸರದ ರಕ್ಷಣೆಯಾಗುತ್ತದೆ.
ಸಸ್ಯ-ಆಧಾರಿತ ಮಾಂಸ ಮಾರುಕಟ್ಟೆ ಜಾಗತಿಕವಾಗಿ ಬೆಳೆಯುತ್ತಿದೆ. ಭಾರತದ ಜನಸಂಖ್ಯೆಯಲ್ಲಿ ಶೇಕಡ 30ರಷ್ಟು ಸಸ್ಯಹಾರಿಗಳಿದ್ದರೆ ಉಳಿದ 70ರಷ್ಟು ಮಂದಿ ಫ್ಲೆಕ್ಸಿಟೇರಿಯನ್ಸ್. ಅಂದ್ರೆ ಆಗಾಗ್ಗ ಮಾಂಸಾಹಾರ ಸೇವನೆ ಮಾಡ್ತಾರೆ. ಆದ್ರೂ ಭಾರತದಲ್ಲಿ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ.