ಶಾಪಿಂಗ್ ಎಂದ ತಕ್ಷಣ ನೆನಪಾಗುವುದು ಮಹಿಳೆಯರು. ಆದ್ರೆ ಈಗ ಮಹಿಳೆಯರು ಮಾತ್ರವಲ್ಲ ಅನೇಕ ಪುರುಷರೂ ಶಾಪಿಂಗ್ ಮಾಡುವುದನ್ನು ಇಷ್ಟಪಡ್ತಾರೆ. ಶಾಪಿಂಗ್ ಮಾಡಿದ ನಂತ್ರ ಒತ್ತಡ ಕಡಿಮೆಯಾಯ್ತು ಎನ್ನುವವರೂ ಇದ್ದಾರೆ.
ಶಾಪಿಂಗ್ ಒತ್ತಡ ಕಡಿಮೆ ಮಾಡಿದಂತೆ ಕಂಡರೂ ಇದು ನಕಾರಾತ್ಮಕ ಪರಿಣಾಮವುಂಟು ಮಾಡುತ್ತದೆ. ಅತಿ ಹೆಚ್ಚು ಶಾಪಿಂಗ್ ಒಂದು ಕಾಯಿಲೆ. ಕಂಪಲ್ಸಿವ್ ಬೈಯಿಂಗ್ ಡಿಸಾರ್ಡರ್ ಸಿಬಿಡಿ ಎಂದು ಇದನ್ನು ಕರೆಯಲಾಗುತ್ತದೆ. ಈ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ.
ಸಿಬಿಡಿಯನ್ನು ಆನ್ಲೈನ್ ಶಾಪಿಂಗ್ ಹೆಚ್ಚು ಮಾಡಿದೆ. ಮನೆಯಲ್ಲಿ ಕುಳಿತುಕೊಂಡು ಜನರು ಆನ್ಲೈನ್ ನಲ್ಲಿ ಆರಾಮವಾಗಿ ಶಾಪಿಂಗ್ ಮಾಡ್ತಿದ್ದಾರೆ. ಶಾಪಿಂಗ್ ಚಟವಾಗುವುದು ಗೊತ್ತಾಗುವುದಿಲ್ಲ. ಇದನ್ನು ಇನ್ನೂ ಅಧಿಕೃತವಾಗಿ ಮಾನಸಿಕ ಅಸ್ವಸ್ಥತೆ ಎಂದು ಪರಿಗಣಿಸಿಲ್ಲವಾದ್ರೂ ಇದು ಒಂದು ರೀತಿಯ ಅಸ್ವಸ್ಥತೆಯ ಲಕ್ಷಣ.
ಅನಗತ್ಯ ವಸ್ತುಗಳನ್ನು ಖರೀದಿಸುವುದನ್ನು ತಡೆಯಲು ಸಾಧ್ಯವಾಗದಿರುವುದು. ಅನಗತ್ಯ ಖರೀದಿಯಿಂದ ಹಣಕಾಸಿನ ಸಮಸ್ಯೆ ಎದುರಿಸುವುದು, ಅನಿಯಂತ್ರಿತ ಶಾಪಿಂಗ್‌ನಿಂದಾಗಿ ಕುಟುಂಬಸ್ಥರು, ಸ್ನೇಹಿತರ ಜೊತೆ ಸಮಸ್ಯೆ ತಂದುಕೊಳ್ಳುವುದು. ಹೊಸದನ್ನು ಖರೀದಿಸಲು ಪ್ರತಿ ಬಾರಿ ಹೆಚ್ಚು ಸಮಯ ಹಾಳು ಮಾಡುವುದು ಈ ರೋಗದ ಲಕ್ಷಣ.
ಮನಸ್ಸಿನಲ್ಲಿ ನಕಾರಾತ್ಮಕ ಭಾವನೆ ಬಂದಾಗ, ಮನಸ್ಸು ಕುಗ್ಗಿದಾಗ ಶಾಪಿಂಗ್ ಮಾಡಲು ಮುಂದಾದ್ರೆ ಇದು ರೋಗದ ಲಕ್ಷಣ. ಮುಖ್ಯ ಕೆಲಸವನ್ನು ಬಿಟ್ಟು, ಖರೀದಿ ಬಗ್ಗೆ ಯೋಚಿಸುತ್ತಿದ್ದರೆ, ಮುಖ್ಯ ವಿಷ್ಯವನ್ನು ಮಾತನಾಡುವ ವೇಳೆ ಶಾಪಿಂಗ್ ಬಗ್ಗೆ ಮಾತು ತಿರುಗಿಸಿದರೆ ಅದನ್ನು ಕೂಡ ಶಾಪಿಂಗ್ ವ್ಯಸನಿ ಎನ್ನಬಹುದು.