ಕೊರೊನಾ ವೈರಸ್ ಸೋಂಕಿನಿಂದ ರಕ್ಷಣೆ ಪಡೆಯಲು ಮಾಸ್ಕ್, ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಜರ್ ಬಳಕೆ ಅನಿವಾರ್ಯವಾಗಿದೆ. ಇದ್ರ ಜೊತೆಗೆ ಅನವಶ್ಯಕ ಕಾರಣಕ್ಕೆ ಮನೆಯಿಂದ ಹೊರಬರದಿರುವುದು ಒಳ್ಳೆಯದು. ಕೊರೊನಾ ನಿಯಂತ್ರಣಕ್ಕೆ ದೇಶದ ಅನೇಕ ಭಾಗಗಳಲ್ಲಿ ಲಾಕ್ ಡೌನ್ ಘೋಷಣೆಯಾಗಿದೆ. ಬಹುತೇಕ ಕಂಪನಿಗಳು ವರ್ಕ್ ಫ್ರಂ ಹೋಮ್ ಆದೇಶ ನೀಡಿವೆ. ಕಳೆದ ಒಂದು ವರ್ಷದಿಂದ ಮನೆಯಲ್ಲಿಯೇ ಕೆಲಸ ಮಾಡ್ತಿರುವ ಜನರಿಗೆ ಹೊಸ ಹೊಸ ಸಮಸ್ಯೆ ಕಾಡ್ತಿದೆ. ಅದ್ರಲ್ಲಿ ಕ್ವಾರಂಟೈನ್ ಮಲಬದ್ಧತೆಯೂ ಒಂದು.
ವರ್ಕ್ ಫ್ರಂ ಹೋಮ್ ಗಿಂತ ಮೊದಲು ಅನೇಕರಿಗೆ ಮಲಬದ್ಧತೆ ಸಮಸ್ಯೆಯಿರಲಿಲ್ಲ. ಆದ್ರೆ ಮನೆಯಲ್ಲಿಯೇ ಕೆಲಸ ಮಾಡ್ತಿದ್ದು, ಯಾವುದೇ ದೈಹಿಕ ಚಟುವಟಿಕೆ ಇಲ್ಲದ ಕಾರಣ ಮಲಬದ್ಧತೆ ಸಮಸ್ಯೆ ಕಾಡ್ತಿದೆ. ಜೊತೆಗೆ ಊಟವಾದ ತಕ್ಷಣ ಕೆಲಸಕ್ಕೆ ಕುಳಿತುಕೊಳ್ಳುವುದು ಹಾಗೂ ರಾತ್ರಿ ಊಟದ ತಕ್ಷಣ ಮಲಗುವುದು ಈ ಸಮಸ್ಯೆಯನ್ನು ಹೆಚ್ಚಿಸಿದೆ. ಇದಕ್ಕೆ ವೈದ್ಯರ ಬಳಿ ಮಾತ್ರೆ ತೆಗೆದುಕೊಳ್ಳುವ ಬದಲು ಕೆಲವೊಂದು ಮನೆ ಮದ್ದಿನ ಮೂಲಕ ಈ ಸಮಸ್ಯೆ ಕಡಿಮೆ ಮಾಡಿಕೊಳ್ಳಬಹುದು.
ಮಲಬದ್ಧತೆ ಸಮಸ್ಯೆಯಿರುವವರು ರಾತ್ರಿ ಒಂದು ಕಪ್ ಹಾಲಿಗೆ ಒಂದು ಚಮಚ ತುಪ್ಪವನ್ನು ಹಾಕಿ ಕುಡಿಯಬೇಕು. ಬೆಳಿಗ್ಗೆ ಎದ್ದಾಗ ಹೊಟ್ಟೆ ಕ್ಲೀನ್ ಆಗುವ ಜೊತೆಗೆ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಸೋಂಪ್ ಕೂಡ ಹೊಟ್ಟೆಯನ್ನು ಸ್ವಚ್ಛವಾಗಿಡುವ ಕೆಲಸ ಮಾಡುತ್ತದೆ. ಹಾಗೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಪ್ರತಿ ರಾತ್ರಿ ಒಂದು ಚಮಚ ಹುರಿದ ಸೋಂಪ್ ಗೆ ಬೆಚ್ಚಗಿನ ನೀರನ್ನು ಬೆರೆಸಿ ಕುಡಿಯುವುದ್ರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.
ಫೈಬರ್ ನಿಂದ ಕೂಡಿರುವ ಅಂಜೂರ ಕೂಡ ಮಲಬದ್ಧತೆ ಕಡಿಮೆ ಮಾಡುತ್ತದೆ. ಬೆಚ್ಚಗಿನ ನೀರಿನಲ್ಲಿ ಅಂಜೂರವನ್ನು ನೆನೆಸಿ ತಿನ್ನುವುದ್ರಿಂದ ಮಲಬದ್ಧತೆ ಕಾಡುವುದಿಲ್ಲ.
ಈ ಸಮಸ್ಯೆಗೆ ಎಳ್ಳು ಕೂಡ ಒಳ್ಳೆಯ ಮದ್ದು. ಇದರಲ್ಲೂ ಫೈಬರ್ ಅಂಶವಿರುತ್ತದೆ. ಇದು ಕರುಳನ್ನು ಸ್ವಚ್ಛವಾಗಿಡಲು ನೆರವಾಗುತ್ತದೆ.
ಟೀ ಕೂಡ ಮಲಬದ್ಧತೆ ಸಮಸ್ಯೆ ಕಡಿಮೆ ಮಾಡುತ್ತದೆ. ಆದ್ರೆ ಹಾಲು ಹಾಕಿದ ಟೀ ಕುಡಿಯಬಾರದು. ಶುಂಠಿ ಅಥವಾ ಪುದೀನಾ ಟೀ ಸೇವನೆ ಮಾಡುವುದ್ರಿಂದ ಮಲಬದ್ಧತೆ ಸಮಸ್ಯೆ ಕಡಿಮೆಯಾಗುತ್ತದೆ.