ಈಗೀಗ ಕನ್ನಡಕದ ಬದಲು ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಕೆಲವರಿಗೆ ಇದು ಕನ್ನಡಕದ ಬದಲು ಹೆಚ್ಚು ಹಿತ ಎನಿಸಿದರೆ ಇನ್ನೂ ಕೆಲವರಿಗೆ ಇದೊಂದು ಫ್ಯಾಶನ್ ಆಗಿದೆ. ಬಣ್ಣ ಬಣ್ಣದ ಲೆನ್ಸ್ಗಳು ಮಾರುಕಟ್ಟೆಯಲ್ಲಿ ಲಭ್ಯವಿರೋದ್ರಿಂದ ಅನೇಕರು ಕಾಂಟ್ಯಾಕ್ಟ್ ಲೆನ್ಸ್ ಬಳಕೆ ಮಾಡ್ತಾರೆ. ನೀವು ಕೂಡ ಇದೇ ಸಾಲಿನಲ್ಲಿ ಸೇರಿದವರಾಗಿದ್ದರೆ ಈ ಸ್ಟೋರಿ ನಿಮಗಾಗಿ.
ಕಾಂಟ್ಯಾಕ್ಟ್ ಲೆನ್ಸ್ ದಿನಪೂರ್ತಿ ಬಳಕೆ ಮಾಡೋದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಅವುಗಳನ್ನ ಶುದ್ಧವಾಗಿ ಇಟ್ಟುಕೊಳ್ಳದೇ ಹೋದಲ್ಲಿ ಕಣ್ಣಿಗೆ ಸೋಂಕು ಬರುವ ಸಾಧ್ಯತೆ ಇದೆ. ಅತಿಯಾದ ಕಾಂಟ್ಯಾಕ್ಟ್ ಲೆನ್ಸ್ ಬಳಕೆಯಿಂದ ನಿಮ್ಮ ಕಣ್ಣಿನ ಆರೋಗ್ಯ ಸಂಪೂರ್ಣ ಕೆಡಲಿದೆ.
ಸರಿಯಾದ ರೀತಿಯಲ್ಲಿ ಕಾಂಟ್ಯಾಕ್ಟ್ ಲೆನ್ಸ್ ಹಾಕಿಕೊಳ್ಳದೇ ಇರೋದು, ಅವುಗಳನ್ನ ಸ್ವಚ್ಛಗೊಳಿಸದೇ ಇರೋದು ಇವೆಲ್ಲ ಕಣ್ಣಿನ ಸೋಂಕು ಬರಲು ಪ್ರಮುಖ ಕಾರಣ ಅಂತಾರೆ ವೈದ್ಯರು. ಇದರಿಂದ ಕಾರ್ನಿಯಲ್ ಅಲ್ಸರ್ನಂತಹ ಭಯಾನಕ ಕಾಯಿಲೆ ಬರಬಹುದು. ಇದರಿಂದ ನಿಮ್ಮ ಕಣ್ಣು ಗುಡ್ಡೆಯ ಮೇಲೆ ಬ್ಯಾಕ್ಟೀರಿಯಾ ಅಥವಾ ವೈರಸ್ ಅಟ್ಯಾಕ್ ಮಾಡಲು ಆರಂಭಿಸುತ್ತೆ.
ನಿಮಗೂ ಕೂಡ ಕಣ್ಣಿನಲ್ಲಿ ಸೋಂಕು ಉಂಟಾಗಿದೆ ಎಂದು ಗಮನಕ್ಕೆ ಬಂದ ತಕ್ಷಣ ಕ್ಯಾಂಟ್ಯಾಕ್ಟ್ ಲೆನ್ಸ್ ಬಳಕೆ ನಿಲ್ಲಿಸಿ. ಕೂಡಲೇ ಕಣ್ಣಿನ ವೈದ್ಯರನ್ನ ಭೇಟಿ ಮಾಡಿ. ಕಣ್ಣು ಕೆಂಪಗಾಗೋದು, ಊದಿಕೊಳ್ಳೋದು, ಪದೇ ಪದೇ ಕಣ್ಣಿನಲ್ಲಿ ನೀರು ಬರೋದು, ಕಣ್ಣು ಮಂಜಾಗೋದು, ಕಣ್ಣಿನಲ್ಲಿ ಉರಿ ಇವೆಲ್ಲವೂ ಒಳ್ಳೆಯ ಲಕ್ಷಣಗಳಲ್ಲ. ಇಂತಹ ಸಮಸ್ಯೆ ನಿಮಗೂ ಕಾಣಸಿಕೊಂಡಿದ್ದರೆ ಇದನ್ನ ನಿರ್ಲಕ್ಷ್ಯ ಮಾಡದೇ ವೈದ್ಯರನ್ನ ಭೇಟಿ ಮಾಡಿ.