ಪ್ರತಿಯೊಂದು ಸಂಬಂಧ ಆರಂಭದಲ್ಲಿ ಚೆನ್ನಾಗಿಯೇ ಇರುತ್ತದೆ. ಸಮಯ ಕಳೆದಂತೆ ಸಂಬಂಧದಲ್ಲಿ ಸಿಹಿ ಕಡಿಮೆಯಾಗ್ತಾ ಬರುತ್ತದೆ. ಸಂಗಾತಿ ಜೊತೆಗಿದ್ದರೂ ಒಂಟಿತನ ಕಾಡುತ್ತದೆ.
ಸಂಬಂಧ ಹೊರೆಯಾದಂತೆ ಭಾಸವಾದ್ರೆ ಅಂಥ ಸಂಬಂಧದಿಂದ ಹೊರಗೆ ಬರುವುದು ಲೇಸು. ಕೆಲವೊಂದು ಲಕ್ಷಣಗಳು ಇಬ್ಬರ ಮಧ್ಯೆ ಪ್ರೀತಿ ಕಡಿಮೆಯಾಗಿದೆ ಎಂಬುದನ್ನು ಹೇಳುತ್ತವೆ.
ಸಂಗಾತಿ ಮಧ್ಯೆ ಕಿರಿಕಿರಿ : ಸಂಗಾತಿಗೆ ನಿಮ್ಮ ಪ್ರತಿಯೊಂದು ಕೆಲಸ ಕಿರಿಕಿರಿಯಾಗುತ್ತದೆ. ನಿಮ್ಮ ಮಾತಿಗೆ ಸಂಗಾತಿ ಕಿರಿಕಿರಿ ಅನುಭವಿಸುತ್ತಾರೆ, ಜಗಳ ಮಾಡುತ್ತಾರೆಂದ್ರೆ ಸಂಬಂಧ ಹಾಳಾಗುತ್ತಿದೆ ಎಂದೇ ಅರ್ಥ. ಒಂದೆರಡು ದಿನ ಹೀಗಾದ್ರೆ ಅದು ದೊಡ್ಡ ವಿಷ್ಯವಲ್ಲ. ತಿಂಗಳು-ಆರು ತಿಂಗಳವರೆಗೂ ಇದು ಮುಂದುವರೆದ್ರೆ ಸಂಬಂಧದಿಂದ ಹೊರ ಬರುವುದು ಒಳ್ಳೆಯದು.
ಆತ್ಮ ಗೌರವಕ್ಕೆ ಧಕ್ಕೆ : ಸಂಬಂಧ ಗಟ್ಟಿಯಾಗಿರಲು ಪರಸ್ಪರ ಗೌರವ ಮುಖ್ಯ. ಸಂಗಾತಿ ಮಧ್ಯೆ ಮೇಲು-ಕೀಳಿಲ್ಲ. ಇಬ್ಬರೂ ಒಂದೆ. ಆದ್ರೆ ಪದೇ ಪದೇ ಸಂಗಾತಿ ನಿಮ್ಮನ್ನು ಅಪಮಾನಿಸುತ್ತಿದ್ದಾರೆ, ನಿಮಗೆ ಗೌರವ ನೀಡುತ್ತಿಲ್ಲವೆಂದ್ರೆ ನಿಮ್ಮಿಬ್ಬರ ಮಧ್ಯೆ ಏನೂ ಸರಿಯಿಲ್ಲ ಎಂದೇ ಅರ್ಥ.
ನಮ್ಮನ್ನು ನಾವು ಸಾಬೀತುಪಡಿಸುವುದು : ಇಬ್ಬರ ಮಧ್ಯೆ ಪ್ರೀತಿಯಿದ್ರೆ ಇದ್ರ ಅಗತ್ಯವಿಲ್ಲ. ಎಲ್ಲವೂ ಒಳ್ಳೆಯದಾಗಿಯೇ ಕಾಣುತ್ತದೆ. ಪ್ರೀತಿ ಕಡಿಮೆಯಾಗ್ತಿದ್ದಂತೆ ನಮ್ಮನ್ನು ನಾವು ಸಂಗಾತಿ ಮುಂದೆ ಸಾಬೀತುಪಡಿಸುವ ಪರಿಸ್ಥಿತಿ ಎದುರಾಗುತ್ತದೆ.
ಸಂಗಾತಿ ಮಧ್ಯೆ ನಾಟಕ : ಸಂಗಾತಿ ಜೊತೆಗಿರುವಾಗ ಅಸಹಜತೆ ಕಾಡುತ್ತದೆ. ಸಂಗಾತಿ ಮುಂದೆ ಇಷ್ಟವಿಲ್ಲದೆ ಹೋದ್ರೂ ನಾಟಕವಾಡುತ್ತಿದ್ದೀರೆಂದಾದ್ರೆ ಇಂಥ ಸಂಬಂಧ ದೀರ್ಘಕಾಲ ಬಾಳುವುದಿಲ್ಲ.