ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ ನಮ್ಮನ್ನು ಕಾಡುತ್ತದೆ. ಆದ್ರೆ ಆ ದೇವಸ್ಥಾನದಲ್ಲಿ 20 ಸಾವಿರಕ್ಕೂ ಹೆಚ್ಚು ಇಲಿಗಳಿವೆ. ಇಲಿಗಳು ಸ್ಪರ್ಶ ಮಾಡಿದ ವಸ್ತುವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿಯೂ ನೀಡಲಾಗುತ್ತದೆ.
ರಾಜಸ್ಥಾನದ ಬಿಕಾನೆರ್ ನಿಂದ ಸುಮಾರು 30 ಕಿಲೋಮೀಟರ್ ದೂರದಲ್ಲಿರುವ ದೇಶ್ನೋಕ್ ದಲ್ಲಿ ಕರಣಿ ಮಾತೆಯ ಮಂದಿರವಿದೆ. ಈ ಮಂದಿರದಲ್ಲಿ 20 ಸಾವಿರಕ್ಕೂ ಹೆಚ್ಚು ಇಲಿಗಳಿವೆ. ಇಷ್ಟೆಲ್ಲ ಇಲಿಗಳಿದ್ರೂ ಅಲ್ಲಿ ಕೆಟ್ಟ ವಾಸನೆ ಬರುವುದಿಲ್ಲ. ಇಲಿ ಮುಟ್ಟಿದ ಪ್ರಸಾದವನ್ನು ತಿಂದ್ರೂ ಯಾವುದೆ ಭಕ್ತರು ರೋಗಕ್ಕೆ ತುತ್ತಾಗಿಲ್ಲ. ಭಾರತಕ್ಕೆ ಪ್ಲೇಗ್ ಬಂದ ಸಮಯದಲ್ಲಿ ಕೂಡ ಈ ದೇವರ ಪ್ರಸಾದವನ್ನು ಭಕ್ತರು ಸೇವಿಸಿದ್ದಾರೆ.
ಈ ದೇವಸ್ಥಾನದ ಒಳಹೊಕ್ಕ ನಂತ್ರ ಕಾಲು ಕಾಲಿಗೆ ಇಲಿಗಳು ಸಿಗುತ್ವೆ. ಬಿಳಿ ಇಲಿಗಳೂ ದೇವಸ್ಥಾನದಲ್ಲಿವೆ. ಈ ಇಲಿಗಳನ್ನು ಪವಿತ್ರವೆಂದು ಪರಿಗಣಿಸಲಾಗಿದೆ. ದೇವಸ್ಥಾನಕ್ಕೆ ಹೋದ ವೇಳೆ ಬಿಳಿ ಇಲಿ ಕಣ್ಣಿಗೆ ಬಿದ್ರೆ ನಿಮ್ಮ ಬೇಡಿಕೆ ಈಡೇರುತ್ತೆ ಎಂದರ್ಥ. ದೇವಿಗೆ ನೀಡಿದ ಪ್ರಸಾದವನ್ನು ಮೊದಲು ಇಲಿಗಳು ತಿನ್ನುತ್ತವೆ. ನಂತ್ರ ಅದನ್ನು ಭಕ್ತರಿಗೆ ನೀಡಲಾಗುತ್ತದೆ. ಈ ಪ್ರಸಾದ ಎಲ್ಲ ರೋಗಗಳನ್ನು ಕಡಿಮೆ ಮಾಡುತ್ತೆ ಎಂದು ನಂಬಲಾಗಿದೆ.