ಈ ಚಮತ್ಕಾರಿ ಅಕ್ಕಿಯನ್ನು ಬೇಯಿಸುವುದೇ ಬೇಡ. ನೀರಿನಲ್ಲಿ ನೆನೆಸಿಟ್ಟರೂ ಸಾಕು. ಪುಷ್ಕಳವಾದ ಅನ್ನ ತಯಾರಾಗುತ್ತದೆ.
12ನೇ ಶತಮಾನದಲ್ಲಿ ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳನ್ನು ಆಳುತ್ತಿದ್ದ ಅಹೋಮ್ ಸಾಮ್ರಾಜ್ಯದಲ್ಲಿ ಹೆಚ್ಚು ಬೆಳೆಯುತ್ತಿದ್ದ ಈ ಅಕ್ಕಿ, ಇದೀಗ ತೆಲಂಗಾಣದಲ್ಲಿ ಬೇರೂರಿದೆ.
ಬೋಕಾ ಸಾವುಲ್ ಅಥವಾ ಮಡ್ ರೈಸ್ ಎಂದೇ ಕರೆಯುವ ವಿಶಿಷ್ಟ ತಳಿಯ ಅಕ್ಕಿಯನ್ನು ತೆಲಂಗಾಣದ ಕರೀಂ ನಗರ ಜಿಲ್ಲೆ ಶ್ರೀರಾಮುಲಪಲ್ಲಿಯ ಶ್ರೀಕಾಂತ್ ಎಂಬ ರೈತ ಬಿತ್ತನೆ ಮಾಡಿದ್ದಾರೆ. ಸುಮಾರು 120 ಕ್ಕೂ ಹೆಚ್ಚು ಪ್ರಭೇದದ ಭತ್ತವನ್ನು ಸಾವಯವ ಪದ್ಧತಿಯಲ್ಲಿ ಬೆಳೆದಿರುವ ಶ್ರೀಕಾಂತ್, ಬೋಕಾ ಸಾವುಲ್ ಗಾಗಿ ಒಂದುವರೆ ವರ್ಷ ಹುಡುಕಾಟ ನಡೆಸಿದ್ದರು.
ಈ ವಿಶಿಷ್ಟ ತಳಿಯ ಭತ್ತ ಹುಡುಕಿಕೊಂಡು ಗೌಹಾಟಿ ವಿವಿಯ ಮೊರೆ ಹೋಗಿದ್ದು, ತನ್ನ 5 ಗುಂಟೆಯಲ್ಲಿ ಬಿತ್ತನೆ ಮಾಡಿದ್ದಾರೆ. 5 ಚೀಲದಷ್ಟು ಭತ್ತ ಸಿಗುವ ನಿರೀಕ್ಷೆ ಇದ್ದು, ಅಷ್ಟನ್ನೂ ಪುನಃ ಬಿತ್ತನೆ ಮಾಡುತ್ತೇನೆ. ಮುಂದಿನ ಪೀಳಿಗೆಗೆ ಇದರ ಪರಿಚಯ ಉಳಿಯಬೇಕು ಎನ್ನುತ್ತಾರೆ ಶ್ರೀಕಾಂತ್.
ಈ ಅಕ್ಕಿಗೆ ಭಾರತ ಸರ್ಕಾರದ ಜಿಐ ಟ್ಯಾಗ್ ಕೂಡ ಇದ್ದು, ಶೇ.10.73 ರಷ್ಟು ನಾರಿನಂಶ (ಫೈಬರ್), ಶೇ.6.8 ರಷ್ಟು ಪ್ರೊಟೀನ್ ಅಂಶ ಒಳಗೊಂಡಿದೆ. ಬಿಸಿ ನೀರಿನಲ್ಲಿ ನೆನಸಿದರೆ ಅವಲಕ್ಕಿಯಂತೆ ಅರಳಿಕೊಳ್ಳುವ ಇದು ಬಿಸಿಯಾಗಿಯೂ ಇರುತ್ತದೆ. ತಣ್ಣೀರಿನಲ್ಲಿ ನೆನೆಸಿಟ್ಟರೆ ತಣ್ಣಗಿರುತ್ತದೆ. ಇದು ಬೋಕಾ ಸಾವುಲ್ ನ ಚಮತ್ಕಾರಿ ಗುಣ.