ಮಾನಸಿಕ ಒತ್ತಡ ಅನ್ನೋದು ಮಾನಸಿಕವಾಗಿ ತುಂಬಾನೇ ಪರಿಣಾಮ ಬೀರಬಲ್ಲ ಸಮಸ್ಯೆ ಎಂದು ಎಲ್ಲರೂ ಹೇಳ್ತಾರೆ. ಆದರೆ ಇದೇ ಮೊದಲ ಬಾರಿಗೆ ಅಧ್ಯಯನವೊಂದು ಒತ್ತಡದ ಬಗ್ಗೆ ಒಂದೊಳ್ಳೆ ಫಲಿತಾಂಶವನ್ನ ನೀಡಿದೆ. ಈ ಸಮಸ್ಯೆಯಿಂದ ಮೆದುಳಿನ ಆರೋಗ್ಯ ವೃದ್ಧಿಯಾಗುತ್ತೆ ಎಂದು ಹೇಳಿದೆ ಈ ಹೊಸ ಅಧ್ಯಯನ.
ಇಲ್ಲಿಯವರೆಗೆ ಮಾನಸಿಕ ಒತ್ತಡದಿಂದಾಗಿ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಚರ್ಮದ ಸಮಸ್ಯೆ, ಜೀರ್ಣಕ್ರಿಯೆ ಸಮಸ್ಯೆ, ತಲೆ ನೋವು, ಆತಂಕ ಹೀಗೆ ನಾನಾ ಸಮಸ್ಯೆಗಳು ಉಂಟಾಗುತ್ತೆ ಎಂದೇ ಹೇಳಲಾಗುತ್ತಿತ್ತು. ಆದರೆ ಅಮೆರಿಕದ ಪೆನ್ ಸ್ಟೇಟ್ ಯೂನಿವರ್ಸಿಟಿ ನಡೆಸಿದ ಸಂಶೋಧನೆಯ ಅಡಿಯಲ್ಲಿ ಈ ಒತ್ತಡದ ಸಮಸ್ಯೆಗೆ ಹೊಸ ವ್ಯಾಖ್ಯಾನವೇ ದೊರಕಿದೆ. ಈ ಅಧ್ಯಯನದ ಪ್ರಕಾರ ಒಳ್ಳೆಯ ಆರೋಗ್ಯ ಬೇಕು ಅಂದರೆ ಜೀವನದಲ್ಲಿ ಒತ್ತಡ ಇರಬೇಕಂತೆ. ಹಾಗಾದ್ರೆ ಒತ್ತಡದಂತಹ ಸಮಸ್ಯೆಯನ್ನೇ ಕಾಣದವರ ಕತೆ ಏನು..? ಇದಕ್ಕೂ ಈ ಅಧ್ಯಯನದಲ್ಲಿ ಉತ್ತರ ಹುಡುಕಲಾಗಿದೆ.
ಜರ್ನಲ್ ಎಮೋಷನ್ನಲ್ಲಿ ಪ್ರಕಟಿಸಲಾದ ವರದಿಯಲ್ಲಿ, ಸುಮಾರು 2800 ಮಂದಿಯನ್ನ ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಮೊದಲು ಅವರಿಗೆ ಒಂದಷ್ಟು ಪರೀಕ್ಷೆಗಳನ್ನ ಮಾಡಲಾಯ್ತು. ಬಳಿಕ ಅವರ ಯೋಗ ಕ್ಷೇಮದ ಬಗ್ಗೆ ಸತತ 8 ರಾತ್ರಿ ಪರಿಶೀಲನೆ ನಡೆಸಲಾಯ್ತು. ಇದರಲ್ಲಿ ಒತ್ತಡದ ಸಮಸ್ಯೆ ಹೊಂದಿರದ ಗುಂಪಿನ 10 ಪ್ರತಿಶತ ಸದಸ್ಯರು ದೀರ್ಘಕಾಲದವರೆಗೆ ಆರೋಗ್ಯವನ್ನ ಕಾಪಾಡಿಕೊಳ್ಳಲಾಗೋದಿಲ್ಲ ಎಂದು ತಿಳಿದು ಬಂದಿದೆ.