ವಯಸ್ಸು ಮೂವತ್ತು ದಾಟಿತಾ? ಸಂಬಂಧಿಕರು ಮದುವೆ ಮಾಡ್ಕೋ ಮಾರಾಯ್ತಿ ಅಂತ ಬೆನ್ನು ಬಿದ್ದಿದ್ದಾರಾ? ಇವಿಷ್ಟೇ ಕಾರಣಕ್ಕೆ ನೀವು ಮದ್ವೆ ಆಗೋ ನಿರ್ಧಾರಕ್ಕೆ ಬರುವುದು ಸರಿಯಲ್ಲ.
ಮದ್ವೆ ಆಗುವುದಾದರೆ ಅದಕ್ಕೆ ಸರಿಯಾದ ಕಾರಣ ಇರಬೇಕು. ಹಾಗಿದ್ರೆ ನಾವು ಮದ್ವೆ ನಿರ್ಧಾರಕ್ಕೆ ಬರುವ ಹಿಂದಿನ ಕಾರಣಗಳು ಸರಿ ಇದ್ಯಾ ಅಥ್ವಾ ತಪ್ಪಾ ಅಂಥ ಗೊತ್ತಾಗೋದು ಹೇಗೆ? ನಾವು ನಾಲ್ಕು ಕಾರಣಗಳನ್ನು ಇಲ್ಲಿ ಕೊಟ್ಟಿದ್ದೇವೆ, ಓದಿ.
ಶ್ರೀಮಂತ ಅನ್ನೋ ಕಾರಣಕ್ಕೆ: ನೀವು ಮದ್ವೆ ಆಗಲು ನಿರ್ಧರಿಸಿದ ಹುಡುಗ ಶ್ರೀಮಂತ ಆಗಿದ್ದರೆ ಒಳ್ಳೆಯದೆ. ಆರ್ಥಿಕವಾಗಿ ಸಬಲನಾಗಿರದ ವ್ಯಕ್ತಿಯನ್ನು ಮದುವೆ ಆಗುವುದು ಒಳ್ಳೆ ನಿರ್ಧಾರ ಅಲ್ವೇ ಅಲ್ಲ. ಹಾಗಂತ ಹುಡುಗ ಶ್ರೀಮಂತ ಆದ್ರೆ ಅಷ್ಟೇ ಸಾಕಾ? ಇಬ್ಬರ ನಡುವೆ ಹೊಂದಾಣಿಕೆಯೂ ಇರಬೇಕಲ್ವಾ? ಇದರ ಬಗ್ಗೆನೂ ಯೋಚಿಸಿ.
ಪೋಷಕರ ಕಿರಿಕಿರಿಯಿಂದ ಸ್ವಾತಂತ್ರ್ಯ: ಪೋಷಕರ ಕಟ್ಟಲೆಗಳು, ಕಿರಿಕಿರಿ, ಮನೆಯಲ್ಲಿನ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಕಷ್ಟವಾಗುವಾಗುತ್ತಿದ್ದಾಗ ಕೆಲವರು ಮದ್ವೆ ನಿರ್ಧಾರಕ್ಕೆ ಬರುವುದುಂಟು. ಈ ಕಾರಣಗಳಿಗೆ ನೀವು ಮದ್ವೆ ಆಗಲು ಯೋಚಿಸ್ತಿದ್ದೀರಿ ಅಂತಾದರೆ ಸ್ವಲ್ಪ ತಾಳಿ. ಈ ಸಮಸ್ಯೆಗೆ ಮನೆಯಲ್ಲಿನ ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುವ ಅಥವಾ ನಿಮ್ಮದೇ ಆದ ಫ್ಲಾಟ್ ಕೊಳ್ಳುವಂಥ ಅನ್ಯ ಮಾರ್ಗವೂ ಇದೆ. ಅಷ್ಟಕ್ಕೂ, ಮದ್ವೆ ಆದ ಮೇಲೆ ನೀವೀಗ ಅನುಭವಿಸುತ್ತಿರುವ ಕಿರಿಕಿರಿ ಇರಲ್ಲ ಅಂತ ಗ್ಯಾರಂಟಿಯೇನೂ ಇರುವುದಿಲ್ಲ.
ಪೋಷಕರಿಗೆ ಇಷ್ಟ ಆಗಿದೆ : ನೋಡಿದ ಹುಡುಗನನ್ನು ಮದ್ವೆ ಆಗಬೇಕೋ, ಬೇಡವೋ ಅನ್ನೋ ಗೊಂದಲ ನಿಮ್ಮನ್ನು ಕಾಡುತ್ತಿದೆ. ಆದ್ರೆ ಪೋಷಕರಿಗೆ ಆತ ಇಷ್ಟ ಆಗಿದ್ದಾನೆ. ಪೋಷಕರಿಗೆ ಇಷ್ಟ ಅನ್ನೋ ಒಂದೇ ಕಾರಣಕ್ಕೆ ಮದ್ವೆ ನಿರ್ಧಾರಕ್ಕೆ ಬರಬೇಡಿ. ಯಾಕೆಂದ್ರೆ ನಂತರ ಆ ವ್ಯಕ್ತಿ ಜೊತೆ ಜೀವನ ಮಾಡೋದು ನೀವೇ ಹೊರತು ನಿಮ್ಮ ಪೋಷಕರಲ್ಲ. ನಿಮಗೂ ಒಪ್ಪಿಗೆಯಾಗಬೇಕು, ಪೋಷಕರಿಗೂ ಇಷ್ಟ ಆಗುವಂತಿರಬೇಕು ನಿಮ್ಮ ಸಂಗಾತಿ.
ಸಮಾಜದ ಒತ್ತಡ : ನಿಮ್ಮ ಸುತ್ತಮುತ್ತಲಿದ್ದವರು, ಗೆಳೆಯರು ಮದ್ವೆ ಆಗುತ್ತಿದ್ದಾಗ ಪೋಷಕರೂ ಲೇಟ್ ಮಾಡ್ಬೇಡಾ ಅಂತ ಹೇಳುತ್ತಿದ್ದಾಗ ಮದ್ವೆ ಬಗ್ಗೆ ಆಲೋಚನೆ ಬರುವುದು ಸಹಜ. ಆದರೆ ಮದುವೆಗೆ ಸರಿಯಾದ ಸಂಗಾತಿ ಮುಖ್ಯವೇ ಹೊರತು ಬೇರೆಯವರು ಏನು ಹೇಳ್ತಾರೆ ಅನ್ನುವುದಲ್ಲ. ಹಾಗಾಗಿ ಮದ್ವೆ ನಿರ್ಧಾರಕ್ಕೆ ಬರೋ ಮುನ್ನ ಯೋಚಿಸಿ ಹೆಜ್ಜೆ ಇಡಿ.