ದಿನವಿಡೀ ದುಡಿದ ದೇಹಕ್ಕೆ ವಿಶ್ರಾಂತಿ ಬೇಕು. ದುಡಿದು ಬಂದಾಕ್ಷಣ ಎಲ್ಲವೂ ನಿಮ್ಮ ಮೂಗಿನ ನೇರಕ್ಕೆ ನಡೆಯಬೇಕೆಂದು ಭಾವಿಸಬೇಡಿ.
ಬಂದ ಕೂಡಲೇ ಅದಾಗಿಲ್ಲ, ಇದಾಗಿಲ್ಲ, ನಂದೇ ನನಗಾಗಿದೆ ಎಂದೆಲ್ಲಾ ಗೊಣಗುತ್ತಾ ಸಿಟ್ಟು ತೋರಿದರೆ, ಮನೆಯಲ್ಲಿ ನಿಮಗಾಗಿ ಕಾಯುತ್ತಿದ್ದವರು ನಿರಾಸೆಯಾಗುತ್ತಾರೆ. ಮನೆಯಲ್ಲಿ ಕುಟುಂಬ ಸದಸ್ಯರೊಂದಿಗೆ ಆತ್ಮೀಯವಾಗಿ ಮಾತನಾಡುವುದನ್ನು ರೂಢಿಸಿಕೊಳ್ಳಿ.
ನಿಮ್ಮ ಸಂಗಾತಿ, ಪೋಷಕರು, ಮಕ್ಕಳು ಹೀಗೆ ಮನೆಯಲ್ಲಿ ಯಾರು ಏನೇ ಹೇಳಿದರೂ, ತಾಳ್ಮೆಯಿಂದ ಕೇಳಿಸಿಕೊಳ್ಳಿ. ನೀವು ಅವರ ಬೇಡಿಕೆಯನ್ನು ಈಡೇರಿಸುವುದಕ್ಕಿಂತ ಹೆಚ್ಚು ಖುಷಿ ಅವರಾಡುವ ಮಾತುಗಳನ್ನು ಕೇಳಿಸಿಕೊಂಡಾಗ ಆಗುತ್ತದೆ.
ಮನೆಯಲ್ಲಿ ಹಿರಿಯರು ಏನಾದರೂ ಹೇಳಿದಾಗ, ತಾತ್ಸಾರ ಮನೋಭಾವ ತೋರದೆ, ಅವರೊಂದಿಗೆ ಚರ್ಚೆ ನಡೆಸಿ. ಅವರು ಹೇಳಿದ ಕೆಲಸವನ್ನು ಮಾಡಲು ಸಾಧ್ಯವಾಗದಿದ್ದರೆ, ತಿಳಿಸಿ ಹೇಳಿ. ಅವರಿಂದ ಕೇಳಿಸಿಕೊಳ್ಳುವ ಮೊದಲೇ ನೀವು ಸುಮ್ಮನಿರಿಸಿದರೆ ನೊಂದುಕೊಂಡಾರು. ಮತ್ತೊಮ್ಮೆ ನಿಮ್ಮ ಬಳಿ ಮಾತನಾಡಲು ಕೂಡ ಹಿಂದೆ ಮುಂದೆ ನೋಡಬಹುದು.
ಸಂಗಾತಿಯೊಂದಿಗೆ ಆತ್ಮೀಯತೆಯಿಂದ ಇರಿ. ಅವರು ದಿನವಿಡಿ ಮನೆಯಲ್ಲಿ ನಡೆದ ಬೆಳವಣಿಗೆಗಳನ್ನು ಹೇಳುವಾಗ ಕೇಳಿಸಿಕೊಳ್ಳಿ. ಮಕ್ಕಳ ಬಗ್ಗೆಯೂ ನಿರ್ಲಕ್ಷ್ಯ ತೋರಬೇಡಿ. ಕೇಳುವ ತಾಳ್ಮೆ ನಿಮಗಿದ್ದರೆ, ಅವರ ಸಮಸ್ಯೆಗೆ ಅರ್ಧ ಸ್ಪಂದಿಸಿದಂತೆ.
ಆಪ್ತತೆಯಿಂದ ಕುಟುಂಬದಲ್ಲಿ ಆತ್ಮೀಯತೆ ಪ್ರೀತಿ ಹೆಚ್ಚಾಗುತ್ತದೆ. ಏನೆ ಇದ್ದರೂ ನಿಮ್ಮ ಬಳಿ ಹೇಳಿಕೊಳ್ಳಬೇಕೆಂದು ಬಯಸುತ್ತಾರೆ. ನೀವೂ ಬದಲಾಗುತ್ತೀರಿ.