ಕೊರೊನಾದಿಂದ ರಕ್ಷಣೆ ಪಡೆಯಲು ಜನರು ಕಷಾಯ ಸೇವನೆ ಮಾಡ್ತಿದ್ದಾರೆ. ಮಲ್ಟಿ-ವಿಟಮಿನ್ ಗಳ ಮೊರೆ ಹೋಗಿದ್ದಾರೆ. ನೀವೂ ಕೊರೊನಾದಿಂದ ರಕ್ಷಣೆ ಪಡೆಯಲು ಇದನ್ನು ಸೇವನೆ ಮಾಡ್ತಿದ್ದರೆ ಅದ್ರ ಪ್ರಮಾಣವನ್ನು ಕಡಿಮೆ ಮಾಡಿ. ಯಾಕೆಂದ್ರೆ ಕಷಾಯ ಹಾಗೂ ಮಲ್ಟಿ ವಿಟಮಿನ್ ಮತ್ತೊಂದು ಸಮಸ್ಯೆಗೆ ಕಾರಣವಾಗ್ತಿದೆ.
ದೆಹಲಿ ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಆದರೆ ಅತಿಯಾದ ಕಷಾಯವನ್ನು ಸೇವಿಸಿದ ನಂತರ ಅನೇಕರಿಗೆ ಮೂಲವ್ಯಾಧಿ ಸಮಸ್ಯೆ ಕಾಡಲು ಶುರುವಾಗಿದೆ. ಕಷಾಯ ಹಾಗೂ ಮಲ್ಟಿ-ವಿಟಮಿನ್ ಅವ್ರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ.
ವಿಟಮಿನ್ ಸಿ, ಕೊರೊನಾ ವೈರಸ್ನಿಂದ ನಮ್ಮನ್ನು ದೂರವಿರಿಸುತ್ತದೆ. ವಿಟಮಿನ್ ಡಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಕಷಾಯ, ಅಪಾಯಕಾರಿ ವೈರಸನ್ನು ಗಂಟಲಿನಲ್ಲಿಯೇ ಕೊಲ್ಲುತ್ತದೆ. ಆದ್ರೆ ಅತಿಯಾದ ಸೇವನೆ ಸಮಸ್ಯೆ ತಂದಿದೆ. ದೆಹಲಿಯ ಮೂಲ್ಚಂದ್ ಆಸ್ಪತ್ರೆಗೆ ಮೂಲವ್ಯಾಧಿ ಸಮಸ್ಯೆ ಹೊತ್ತು ಪ್ರತಿದಿನ ನಾಲ್ಕರಿಂದ 5 ರೋಗಿಗಳು ಬರುತ್ತಿದ್ದಾರೆ.
ವಿಟಮಿನ್ ಡಿ ಅಥವಾ ವಿಟಮಿನ್ ಸಿ ಯ ಅತಿಯಾದ ಸೇವನೆಯು ಮಲಬದ್ಧತೆ ರೋಗಕ್ಕೆ ಕಾರಣವಾಗುತ್ತದೆ. ಕೊರೊನಾ ವೈರಸ್ನಿಂದ ಚೇತರಿಸಿಕೊಂಡ ನಂತರ ದೇಹದಲ್ಲಿನ ಸಣ್ಣಪುಟ್ಟ ಬದಲಾವಣೆಗಳನ್ನು ಸಹ ಸಮಯಕ್ಕೆ ಗಮನಿಸಿ ಎಂದು ಮೂಲ್ಚಂದ್ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ಡಾ. ಸಚಿನ್ ಅಂಬೇಕರ್ ಹೇಳಿದ್ದಾರೆ. ಕೊರೊನಾ ನಂತರ ಜನರು ಹೃದ್ರೋಗದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದ್ದಾರೆ.
ಈ ಮೊದಲು 45 ವರ್ಷ ವಯಸ್ಸಿನ ನಂತರ ನಿಯಮಿತವಾಗಿ ಆರೋಗ್ಯ ತಪಾಸಣೆ ನಡೆಸುವಂತೆ ಸೂಚಿಸಲಾಗಿತ್ತು. ಆದರೆ ಈಗ ವೈದ್ಯರು 30 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ ಮಾಡಲು ಶಿಫಾರಸು ಮಾಡುತ್ತಿದ್ದಾರೆ. ಕೊರೊನಾ ನಂತರ ಸಂಭವಿಸುವ ರೋಗಗಳನ್ನು ಪೋಸ್ಟ್ ಕೋವಿಡ್ ರೋಗವೆಂದು ಕರೆಯಲಾಗ್ತಿದೆ. ಉಸಿರಾಟ ಮತ್ತು ಆಯಾಸದ ಸಮಸ್ಯೆ ಅವರನ್ನು ಕಾಡ್ತಿದೆ.
ಜನರ ಅತಿ ಬುದ್ಧಿವಂತಿಕೆ ಅನೇಕ ಸಮಸ್ಯೆಗಳಿಗೆ ಕಾರಣವಾಗ್ತಿದೆ. ಮಲ್ಟಿ-ವಿಟಮಿನ್ ಸೇವನೆಯನ್ನು ನಿರಂತರವಾಗಿ ಮಾಡಬಾರದು ಎಂದು ವೈದ್ಯರು ಹೇಳಿದ್ದಾರೆ. 3 ರಿಂದ 6 ತಿಂಗಳ ಸೇವನೆಯ ನಂತರ ಕನಿಷ್ಠ 3 ತಿಂಗಳ ವಿರಾಮ ಅಗತ್ಯವಿದೆ. ಮಾತ್ರೆ ಮುಂದುವರೆಸುವ ಮೊದಲು ವೈದ್ಯರನ್ನು ಸಂಪರ್ಕಿಸುವಂತೆ ಸಲಹೆ ನೀಡಲಾಗಿದೆ. ಸ್ವಂತ ವೈದ್ಯರಾಗದಂತೆ ಎಲ್ಲರಿಗೂ ಸೂಚನೆ ನೀಡಲಾಗ್ತಿದೆ.