ಕೊರೊನಾ ಸಂಕಷ್ಟದ ನಡುವೆಯೂ ಹಿಂದೂಗಳ ಪ್ರಮುಖ ಹಬ್ಬಗಳಲ್ಲೊಂದಾದ ದೀಪಾವಳಿಯ ಆಚರಣೆ ಶುರುವಾಗಿದೆ. ಪ್ರತಿ ವರ್ಷ ಪಟಾಕಿ, ಬೆಳಕು, ಸಂಭ್ರಮ, ಸಡಗರದಿಂದ ತುಂಬಿ ತುಳುಕ್ತಾ ಇದ್ದ ದೀಪಾವಳಿ ಈ ಬಾರಿ ಕೊರೊನಾದಿಂದಾಗಿ ಮಂಕಾಗಿದೆ.
ಆದರೆ ಈ ಕೊರೊನಾದ ನಡುವೆಯೂ ಹೇಗೆ ದೀಪಾವಳಿ ಆಚರಿಸಬಹುದು ಅನ್ನೋದರ ಬಗ್ಗೆ ಇಲ್ಲಿ ಕೆಲ ಐಡಿಯಾಗಳಿವೆ ನೋಡಿ.
ನಿಮ್ಮ ಮನೆಯನ್ನ ಅಲಂಕಾರ ಮಾಡೋಕೆ ನೀವು ಕೈಯಲ್ಲೇ ತಯಾರಿಸಿದ ಹಣತೆಗಳನ್ನ ಬಳಸಬಹುದು. ಮಣ್ಣಿನ ಹಣತೆಗಳು ನಿಮಗೆ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ದರಕ್ಕೆ ಸಿಗುತ್ತವೆ. ಇದರಿಂದ ನೀವು ಗ್ರಾಮೀಣ ಉದ್ಯಮಕ್ಕೂ ಬೆಲೆ ನೀಡಿದಂತಾಗುತ್ತೆ, ಈಗಾಗಲೇ ಮಾರುಕಟ್ಟೆಗಳಲ್ಲಿ ಬಿದಿರಿನ ದೀಪ, ಮಣ್ಣಿನ ದೀಪ, ಸಗಣಿಯಿಂದ ತಯಾರಾದ ದೀಪ ಹೀಗೆ ತರಹೇವಾರಿ ಹಣತೆಗಳು ನಿಮ್ಮ ಮನೆ ಅಲಂಕಾರಕ್ಕೆ ಕಡಿಮೆ ಖರ್ಚಿನಲ್ಲಿ ಸಿಗಲಿದೆ.
ದೀಪಾವಳಿ ಅಂದರೆ ಮೊದಲು ನೆನಪಾಗ್ತಾ ಇದ್ದಿದ್ದೆ ಪಟಾಕಿ. ಆದರೆ ವಾಯುಮಾಲಿನ್ಯದ ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ಈ ವರ್ಷ ಪಟಾಕಿ ಬಳಕೆಗೆ ನಿರ್ಬಂಧವಿದೆ. ಆದರೆ ನೀವು ಹಸಿರು ಪಟಾಕಿಗಳನ್ನ ಬಳಕೆ ಮಾಡಬಹುದು.
ಮನೆಯನ್ನ ಸಿಂಗಾರ ಮಾಡೋದು ಹೇಗೆ ಎಂಬ ಯೋಚನೆ ನಿಮ್ಮ ತಲೆಯಲ್ಲಿದ್ರೆ ನಿಮ್ಮ ಮನೆಯ ಅಂಗಳದಲ್ಲೇ ಬೆಳೆದ ಹೂಗಳು ನಿಮಗೆ ನೆರವಾಗಲಿವೆ. ಇದರಿಂದ ಮನೆಯ ಅಂದ ಹೆಚ್ಚೋದ್ರ ಜೊತೆ ಜೊತೆಗೆ ಉತ್ತಮ ಸುಗಂಧವೂ ಮನೆ ಸುತ್ತ ಪಸರಿಸಲಿದೆ.
ಹಬ್ಬ ಅಂದ್ಮೇಲೆ ಪ್ರೀತಿ ಪಾತ್ರರಿಗೆ ಉಡುಗೊರೆ ಕೊಡದೇ ಇದ್ದರೆ ಹೇಗೆ ಅಲ್ವಾ..? ಆದರೆ ಕೊರೊನಾದ ಭಯದಲ್ಲಿ ಶಾಪಿಂಗ್ ಹೋಗೋದೂ ಕಷ್ಟ. ಆದರೆ ಆನ್ಲೈನ್ ಶಾಪಿಂಗ್ ನಿಮ್ಮ ಈ ಚಿಂತೆಗೆ ಪರಿಹಾರ ಕೊಡಲಿದೆ.
2020ರಲ್ಲಿ ಹೊರಗಡೆ ಸುತ್ತಾಟ ಕಡಿಮೆಯಾಗಿರಬಹುದು. ಆದರೆ ಕುಟುಂಬಸ್ಥರ ಜೊತೆ ಈ ವರ್ಷ ನೀವು ಕಳೆದಷ್ಟು ಸಮಯವನ್ನ ಯಾವ ವರ್ಷವೂ ಕಳೆದಿರಲಿಕ್ಕಿಲ್ಲ. ಹೀಗಾಗಿ ಹಬ್ಬದ ಸಮಯದಲ್ಲೂ ಕೂಡ ಆದಷ್ಟು ಹೆಚ್ಚಿನ ಸಮಯವನ್ನ ಮನೆಯವರ ಜೊತೆ ಕಳೆಯೋದ್ರಿಂದ ನೆಮ್ಮದಿ ಸಿಗಲಿದೆ.