ಕೊರೊನಾ ಸೋಂಕಿತರ ಸಂಖ್ಯೆ ದೇಶದಲ್ಲಿ ಹೆಚ್ಚಾಗ್ತಿದೆ. ಇದ್ರ ಜೊತೆಯಲ್ಲೇ ಕೊರೊನಾ ಲಸಿಕೆ ಅಭಿಯಾನ ನಡೆಯುತ್ತಿದೆ. ಕೊರೊನಾ ಲಸಿಕೆ ಕೆಲವರ ಮೇಲೆ ಅಡ್ಡ ಪರಿಣಾಮ ಬೀರಿದೆ. ಇದು ಅನೇಕರಲ್ಲಿ ಭಯ ಹುಟ್ಟಿಸಿದ್ದು, ಕೊರೊನಾ ಲಸಿಕೆ ತೆಗೆದುಕೊಳ್ಳಲು ಹಿಂದೇಟು ಹಾಕ್ತಿದ್ದಾರೆ. ಆದ್ರೆ ಕೊರೊನಾ ಲಸಿಕೆ ಸುರಕ್ಷಿತ. ಯಾವುದೇ ಅಪಾಯವಿಲ್ಲವೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪ್ರತಿಯೊಬ್ಬರಿಗೂ ಲಸಿಕೆ ಹಾಕಿಸುವಂತೆ ಪ್ರೋತ್ಸಾಹಿಸಲು ಮನವಿ ಮಾಡಿದ್ದಾರೆ. ಈ ಮಧ್ಯೆ ಕೊರೊನಾ ಲಸಿಕೆ ಮೊದಲು ಯಾವ ಕೆಲಸ ಮಾಡಬಾರದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
ಕೊರೊನಾ ಲಸಿಕೆಗೆ ಮೊದಲು ಯಾವುದೇ ನೋವಿನ ಮಾತ್ರೆ ಸೇವಿಸಬಾರದು. ಸಣ್ಣಪುಟ್ಟ ನೋವಿಗೆ ನೋವಿನ ಮಾತ್ರೆ ಸೇವಿಸುವ ಅಭ್ಯಾಸ ಅನೇಕರಲ್ಲಿದೆ. ಆದ್ರೆ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ 24 ಗಂಟೆ ಮೊದಲು ಯಾವುದೇ ನೋವಿನ ಮಾತ್ರೆ ಸೇವನೆ ಮಾಡಬಾರದು. ಇದು ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.
ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ಆಲ್ಕೋಹಾಲ್ ಸೇವನೆ ಮಾಡಬೇಡಿ. ಮದ್ಯ ಸೇವನೆ ಮಾಡುವುದ್ರಿಂದ ನಿರ್ಜಲೀಕರಣ ಸಮಸ್ಯೆ ಎದುರಾಗಬಹುದು. ಲಸಿಕೆಗೆ ಮೊದಲು ಹೆಚ್ಚು ನೀರಿನ ಸೇವನೆ ಮಾಡುವಂತೆ ಸಲಹೆ ನೀಡಲಾಗುತ್ತದೆ.
ಲಸಿಕೆ ಹಾಕಿಸಿಕೊಳ್ಳುವ ಮೊದಲ ದಿನ ಹಾಗೂ ಆ ದಿನ ಉತ್ತಮ ನಿದ್ರೆಯ ಅವಶ್ಯಕತೆಯಿದೆ. ಉತ್ತಮ ನಿದ್ರೆ ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಯಾವುದೇ ಇಂಜೆಕ್ಷನ್ ತೆಗೆದುಕೊಳ್ಳಬೇಡಿ. ಕೊರೊನಾ ಲಸಿಕೆ ತೆಗೆದುಕೊಳ್ಳುವ ವೇಳೆ ಬೇರೆ ಲಸಿಕೆ ಹಾಕಿಸಿಕೊಳ್ಳಬಾರದು. ಎರಡು ಲಸಿಕೆ ಮಧ್ಯೆ 14 ದಿನಗಳ ಅಂತರವಿರಬೇಕು. ಕೊರೊನಾ ಲಸಿಕೆ ಹಾಕಿದ ನಂತ್ರವೂ 14 ದಿನ ಯಾವುದೇ ಲಸಿಕೆ ಹಾಕಿಸಿಕೊಳ್ಳಬಾರದು.
ಕೊರೊನಾ ಲಸಿಕೆ ಹಾಕಿಸಿಕೊಳ್ತಿದ್ದೇವೆಂಬ ಕಾರಣಕ್ಕೆ ನಿರ್ಲಕ್ಷ್ಯ ಬೇಡ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗಲು ಸಮಯ ಬೇಕು. ಹಾಗಾಗಿ ಲಸಿಕೆ ಹಾಕಿಸಿಕೊಳ್ಳುವ ವೇಳೆ ಮಾಸ್ಕ್ ಧರಿಸಿ. ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.
ಲಸಿಕೆ ಹಾಕಿಸಿಕೊಂಡ 15 ನಿಮಿಷಗಳ ಕಾಲ ಆಸ್ಪತ್ರೆಯಲ್ಲಿರಿ. ಕೆಲವೊಮ್ಮೆ ಲಸಿಕೆ ದೇಹದ ಮೇಲೆ ಅಡ್ಡಪರಿಣಾಮ ಬೀರುತ್ತದೆ. ಹಾಗಾಗಿ ಲಸಿಕೆ ಹಾಕಿಸಿಕೊಂಡ ನಂತ್ರ ಸ್ವಲ್ಪ ಸಮಯ ಆಸ್ಪತ್ರೆಯಲ್ಲಿರಿ.
ಲಸಿಕೆ ಹೆಸರಿನಿಂದಲೇ ಕೆಲವರು ಭಯಭೀತರಾಗ್ತಾರೆ. ಭಯಪಡುವ ಅಗತ್ಯವಿಲ್ಲ. ಸರಿಯಾಗಿ ಆಹಾರ ಸೇವನೆ ಮಾಡಿ, ಮಾನಸಿಕವಾಗಿ ಆರಾಮವಾಗಿರಿ. ಒತ್ತಡ ಕಡಿಮೆ ಮಾಡಿಕೊಳ್ಳಿ.
ಕಳೆದ ಒಂದೂವರೆ ತಿಂಗಳಲ್ಲಿ ಕೊರೊನೊ ವೈರಸ್ ಸೋಂಕಿಗೆ ಒಳಗಾದ ಜನರು ಅಥವಾ ಬ್ಲಡ್ ಪ್ಲಾಸ್ಮಾ ಅಥವಾ ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆ ತೆಗೆದುಕೊಂಡ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು.
ಲಸಿಕೆ ಹಾಕಿಸಿಕೊಂಡ ನಂತ್ರ ಅಲರ್ಜಿ ಸಮಸ್ಯೆಗೆ ಒಳಗಾಗುವ ಜನರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೊದಲು ವೈದ್ಯರನ್ನು ಭೇಟಿ ಮಾಡಬೇಕು.
ಗರ್ಭಿಣಿ ಅಥವಾ ಸ್ತನಪಾನ ಮಾಡ್ತಿರುವ ಮಹಿಳೆಯರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಾರದು. ಇವರ ಮೇಲೆ ಇನ್ನೂ ಲಸಿಕೆ ಪ್ರಯೋಗವಾಗಿಲ್ಲ.