ಕೊರೊನಾ ವೈರಸ್ ಕಾರಣದಿಂದ ಈಗ ಶಾಲೆಗಳನ್ನು ತೆರೆಯುವಂತಿಲ್ಲ. ಮಕ್ಕಳೆಲ್ಲಾ ಮನೆಯಲ್ಲಿಯೇ ಇದ್ದಾರೆ. ಒಂದು ದಿನ ಶಾಲೆಗೆ ರಜೆ ಕೊಟ್ಟಾಗಲೇ ಯಾವಾಗಪ್ಪ ಇವರ ಸ್ಕೂಲ್ ಶುರುವಾಗುತ್ತೆ ಎಂದು ಪೋಷಕರು ಹೇಳುತ್ತಿರುತ್ತಾರೆ. ಈಗಂತೂ ಕೇಳುವುದೇ ಬೇಡ. ತಡವಾಗಿ ಏಳುವುದರ ಜತೆಗೆ ಮೊಬೈಲ್, ಟೀವಿಯಲ್ಲಿಯೇ ಮಕ್ಕಳು ಮುಳುಗಿರುತ್ತಾರೆ. ಇಂತಹ ಮಕ್ಕಳನ್ನು ನಿಭಾಯಿಸುವುದಕ್ಕೆ ಹೀಗೆ ಮಾಡಿ.
ಹೊರಗಡೆ ಹೋಗಿ ಆಡುವುದಕ್ಕೆ ಕೊರೊನಾ ಭಯ. ಹಾಗಾಗಿ ಮಕ್ಕಳು ಮನೆಯಲ್ಲಿಯೇ ಇರುತ್ತಾರೆ. ಮನೆ ಕೆಲಸ ಮಾಡುವುದರ ಜತೆಗೆ ಮಕ್ಕಳನ್ನೂ ನಿಭಾಯಿಸಿಕೊಂಡು ಹೋಗುವುದು ತಾಯಂದಿರಿಗೆ ತುಸು ಕಷ್ಟದ ಕೆಲಸವೆನ್ನಬಹುದು. ಸ್ವಲ್ಪ ಡೊಡ್ಡ ಮಕ್ಕಳಾದರೆ ಒಂದಷ್ಟು ಕೆಲಸವನ್ನು ಅವರಿಗೆ ಹೇಳಿ ಕೊಡಿ. ನೀವು ಚಪಾತಿ ಮಾಡುವಿರಾದರೆ ಅದನ್ನು ಉಂಡೆ ಮಾಡುವುದಕ್ಕೆ ಅಥವಾ ಲಟ್ಟಿಸುವುದಕ್ಕೆ ಅವರಿಗೆ ಕಲಿಸಿ. ಅವರು ಮಾಡುವ ಕೆಲಸವನ್ನು ಪ್ರೋತ್ಸಾಹಿಸಿ.
ಹಾಗೇ ಮನೆ ಒರೆಸುವುದು, ಬಟ್ಟೆ ಒಣಗಿ ಹಾಕುವ ಕೆಲಸವನ್ನು ಅವರಿಗೆ ಹೇಳಿಕೊಡಿ. ಇದರಿಂದ ನಿಮಗೂ ಕೆಲಸದ ಹೊರೆ ತಪ್ಪುತ್ತದೆ. ಅವರಿಗೂ ಒಂದು ರೀತಿ ಖುಷಿಯಾಗುತ್ತದೆ.
ನಿಮ್ಮ ಕೆಲಸವನ್ನು ಆದಷ್ಟು ಬೇಗ ಮುಗಿಸಿಕೊಂಡು ಅವರ ಜತೆ ಆಟವಾಡಿ. ನಿಮ್ಮ ಬಾಲ್ಯ ಕಾಲದಲ್ಲಿ ಆಡುತ್ತಿದ್ದ ಆಟ ಅವರಿಗೆ ಹೇಳಿಕೊಡಿ.
ಇನ್ನು ಚಿಕ್ಕಮಕ್ಕಳಾದರೆ ಅವರಿಗೆ ಒಂದು ಪೇಪರ್ ಕೊಟ್ಟು ಒಂದಷ್ಟು ಕಲರ್ ಕೊಡಿ. ಬಣ್ಣಗಳು ಮಕ್ಕಳನ್ನು ಬೇಗನೆ ಆಕರ್ಷಿಸುತ್ತದೆ.