ಮಕ್ಕಳಿಗೆ ಚಿಕ್ಕಂದಿನಲ್ಲೇ ಹಣದ ಮಹತ್ವದ ಕುರಿತು ತಿಳಿಸಿಕೊಟ್ಟರೆ ಅವರು ಬೆಳೆದ ನಂತರ ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುವುದನ್ನು ತಡೆಯಬಹುದು.
ಮನೆಯಲ್ಲಿ ತಂದೆತಾಯಂದಿರು ಮಕ್ಕಳಿಗೆ ಉಳಿತಾಯವನ್ನು ಹೇಗೆ ಮಾಡಬೇಕು ಎಂಬುದನ್ನು ತಿಳಿಸಿಕೊಟ್ಟರೆ ಮಕ್ಕಳು ದೊಡ್ಡವರಾಗುತ್ತಲೇ ಅದೇ ದಾರಿಯಲ್ಲಿ ಸಾಗುತ್ತಾರೆ. ಇದರಿಂದ ಅವರಿಗೆ ಯಾವುದೇ ಪರಿಸ್ಥಿತಿ ಬಂದರೂ ಅದಕ್ಕೆ ಹೊಂದಿಕೊಂಡು ಬದುಕುವುದಕ್ಕೆ ಸಾಧ್ಯವಾಗುತ್ತದೆ.
ಕೆಲವರು ಮಕ್ಕಳಿಗೆ ಅತೀಯಾದ ಮುದ್ದು ಮಾಡುವುದು, ಮಕ್ಕಳು ಕೇಳಿದ್ದನ್ನೆಲ್ಲಾ ತಂದು ಕೊಡುವುದನ್ನು ಮಾಡುತ್ತಾರೆ. ಅದರ ಬದಲು ಅವರಿಗೆ ಒಂದು ಡಬ್ಬಿ ಕೊಟ್ಟು ಅದಕ್ಕೆ ಹಣ ಹಾಕುವುದಕ್ಕೆ ಹೇಳಿ. ದಿನಕ್ಕೆ ಒಂದು ರೂಪಾಯಿ ಇಲ್ಲ ವಾರಕ್ಕೆ 10 ರೂಪಾಯಿ ಹೀಗೆ ಕೊಟ್ಟು ಅವರ ಬಳಿ ಆ ಡಬ್ಬಿಗೆ ಹಾಕುವುದಕ್ಕೆ ಹೇಳಿ. ಇದರಿಂದ ಅವರು ಹಣ ಸಿಕ್ಕಾಗ ಆ ಡಬ್ಬಿಗೆ ಹಾಕುವು ಅಭ್ಯಾಸ ಬೆಳೆಸಿಕೊಳ್ಳುತ್ತಾರೆ.
ಇನ್ನು ಮಕ್ಕಳನ್ನು ಅಂಗಡಿಗೆ ಸಾಮಾನು ತರಲು ಕಳುಹಿಸಿದಾಗ ಉಳಿದ ಹಣದಿಂದ ಚಾಕೋಲೇಟ್ ತಿನ್ನು ಅನ್ನುವ ಬದಲು ಉಳಿದ ಹಣವನ್ನು ನಿನ್ನ ಡಬ್ಬಿಗೆ ಹಾಕಿಕೋ ಎಂದು ಹೇಳಿ. ಆಗ ಮಕ್ಕಳು ಅಂಗಡಿ ತಿಂಡಿಯತ್ತ ಆಕರ್ಷಿತರಾಗುವುದು ಕಡಿಮೆಯಾಗುತ್ತದೆ. ಹಾಗೇ ಉಳಿತಾಯದ ಕುರಿತು ಅವರಿಗೆ ತಿಳುವಳಿಕೆ ಮೂಡುತ್ತದೆ.