ಮೊದಲೆಲ್ಲಾ ಮನೆ ತುಂಬಾ ಜನ ಇರುತ್ತಿದ್ದರು. ಅಜ್ಜಿ, ಅಜ್ಜ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಎಲ್ಲರೂ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ಈಗ ಅವಿಭಕ್ತ ಕುಟುಂಬಗಳೇ ಕಣ್ಮರೆಯಾಗಿದೆ. ಗಂಡ-ಹೆಂಡತಿ, ಮಕ್ಕಳು ಇಷ್ಟೇ ನಮ್ಮ ಕುಟುಂಬವಾಗಿ ಬಿಟ್ಟಿದೆ. ಇದರಿಂದ ಮಕ್ಕಳಿಗೆ ಒಂದು ರೀತಿಯ ಏಕಾಂಗಿತನ ಕಾಡುತ್ತದೆ.
ಉದ್ಯೋಗದ ನಿಮಿತ್ತನೋ, ಕೆಲವೊಂದು ವೈಯಕ್ತಿಕ ಕಾರಣಗಳಿಂದಲೋ ಈಗ ಎಲ್ಲರು ಅವರದ್ದೇ ಆದ ಒಂದು ಗೂಡು ಕಟ್ಟಿಕೊಂಡು ಇರುತ್ತಾರೆ.ಅಲ್ಲಿ ಇನ್ಯಾರಾದರು ಬಂದರೆ ಅವರ ಖಾಸಗಿತನಕ್ಕೆ ಧಕ್ಕೆ ಆಗುತ್ತದೆ ಎಂಬ ಮನೋಭಾವ ಇರುತ್ತದೆ. ಇನ್ನು ಕೆಲವರು ತಮ್ಮದೇ ಸ್ವಂತ ಮನೆ ಬೇಕು ಎಂದುಕೊಂಡು ಸಾಲ ಮಾಡಿಕೊಂಡು ಗಂಡ-ಹೆಂಡತಿ ಇಬ್ಬರು ಅದನ್ನು ತೀರಿಸಲು ಕಷ್ಟಪಡುತ್ತಿರುತ್ತಾರೆ. ಆದರೆ ಇವೆಲ್ಲದರ ಮಧ್ಯೆ ಮಕ್ಕಳ ಕುರಿತು ಅಷ್ಟಾಗಿ ಗಮನ ಹರಿಸುವುದಕ್ಕೆ ಸಮಯ ಸಿಗುವುದಿಲ್ಲ.
ಕೆಲಸದ ಒತ್ತಡವಿರುವಾಗ ಮಕ್ಕಳು ಸ್ವಲ್ಪ ಕಿರಿಕಿರಿ ಮಾಡಿದರೂ ಮನಸ್ಸಿಗೆ ರಗಳೆ ಆಗಿ ಮಕ್ಕಳ ಮೇಲೆ ರೇಗಾಡಿಬಿಡುತ್ತಾರೆ. ಅವರೊಂದಿಗೆ ಆಡುವುದಕ್ಕೆ, ಸರಿಯಾಗಿ ಓದಿಸುವುದಕ್ಕೆ ಕೂಡ ಸಮಯವಿಲ್ಲದೇ ಕೆಲವೊಮ್ಮೆ ಪಶ್ಚಾತ್ತಾಪ ಪಡುತ್ತಿರುತ್ತಾರೆ.
ಬೆಳೆಯುವ ಮಕ್ಕಳಿಗೆ ತಂದೆ-ತಾಯಿಯ ಅವಶ್ಯಕತೆ ಹೆಚ್ಚಾಗಿರುತ್ತದೆ. ನಾವು ಈಗ ಅವರಿಗೆ ಸರಿಯಾಗಿ ಸಮಯ ನೀಡದೇ ಇದ್ದರೆ ಅವರ ಮನಸ್ಸಿನಲ್ಲಿ ಆ ಕೊರಗು ಹಾಗೇ ಉಳಿದುಬಿಡುತ್ತದೆ.
ಇನ್ನು ಕೆಲವರು ಮಕ್ಕಳ ಜತೆ ಸಮಯ ವಿನಿಯೋಗಿಸುವುದಕ್ಕೆ ಆಗುವುದಿಲ್ಲವೆಂದು ಮಕ್ಕಳು ಕೇಳಿದ್ದು ತಂದುಕೊಡುತ್ತಾರೆ. ಇದರಿಂದ ಮಕ್ಕಳು ಮೊಬೈಲ್, ಟಿವಿಯತ್ತ ಆಕರ್ಷಿತರಾಗುತ್ತಾರೆ. ಇದು ಅವರ ಭವಿಷ್ಯದ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಮಕ್ಕಳಿಗೆ ನಿಮ್ಮ ಕೆಲಸದ ನಡುವೆ ಒಂದಷ್ಟು ಹೊತ್ತು ಸಮಯ ಮೀಸಲಿಡಿ.ಅವರ ಆಟ ಪಾಠ, ಅವರ ಸ್ನೇಹಿತರ ಬಗ್ಗೆ ಆಗಾಗ ವಿಚಾರಿಸುತ್ತಾ ಇರಿ. ಇದರಿಂದ ಅವರು ಕೂಡ ನಿಮ್ಮೊಂದಿಗೆ ಎಲ್ಲಾ ವಿಷಯವನ್ನು ಹೇಳಿಕೊಳ್ಳುತ್ತಾರೆ. ಖುಷಿಯಿಂದ ಇರುತ್ತಾರೆ.