ಕೊರೊನಾ ವೈರಸ್ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ. ಈಗ ಮತ್ತೊಂದು ಅಧ್ಯಯನದ ಫಲಿತಾಂಶ ಹೊರಬಿದ್ದಿದೆ. ಅದ್ರ ಪ್ರಕಾರ, ಕೊರೊನಾ ವೈರಸ್ ಸೋಂಕಿಗೊಳಗಾದ ಪುರುಷರಲ್ಲಿ ಕಾಮಾಸಕ್ತಿ ನಷ್ಟವಾಗ್ತಿದೆಯಂತೆ. ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟದಲ್ಲಿನ ಇಳಿಕೆ ಕಂಡು ಬರುವುದು ಇದಕ್ಕೆ ಕಾರಣವೆಂದು ತಜ್ಞರು ಹೇಳಿದ್ದಾರೆ.
ಹಾಗೆ ಹಾರ್ಮೋನ್‌ಗಳ ಏರುಪೇರಿನಿಂದಾಗಿ ರೋಗಗಳ ವಿರುದ್ಧ ಹೋರಾಡಲು ಪುರುಷರ ಸಾಮರ್ಥ್ಯ ಕಡಿಮೆಯಾಗ್ತಿದೆ ಎಂದು ತಜ್ಞರು ಹೇಳಿದ್ದಾರೆ. ಮೆರ್ಸಿನ್ ವಿಶ್ವವಿದ್ಯಾಲಯದ ಮೂತ್ರ ಶಾಸ್ತ್ರದ ಪ್ರಾಧ್ಯಾಪಕ ಮತ್ತು ಅಧ್ಯಯನದ ಪ್ರಮುಖ ಲೇಖಕ ಸೆಲಾಹಿಟ್ಟಿನ್ ಕಯಾನ್ ಪ್ರಕಾರ, ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆಯಾದ್ರೆ ರೋಗಗಳ ವಿರುದ್ಧ ಹೋರಾಡುವ ಪುರುಷರ ಸಾಮರ್ಥ್ಯ ಕಡಿಮೆಯಾಗುತ್ತದೆ. ಕೊರೊನಾ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ಕೊರೊನಾ ವಿರುದ್ಧ ಹೋರಾಡುವ ಸಾಮರ್ಥ್ಯ ಪುರುಷರಿಗಿಂತ ಮಹಿಳೆಯರಲ್ಲಿ ಏಕೆ ಹೆಚ್ಚಿದೆ ಎನ್ನುವ ಬಗ್ಗೆ ಅಧ್ಯಯನ ನಡೆಸಲಾಗಿದೆ. ಆಗ ಟೆಸ್ಟೋಸ್ಟೆರಾನ್ ವಿಷ್ಯ ಬಹಿರಂಗವಾಗಿದೆ. ಇದು ಪ್ರತಿರಕ್ಷಣಾ ವ್ಯವಸ್ಥೆಯೊಂದಿಗೆ ಸಂಬಂಧ ಹೊಂದಿರುತ್ತದೆ. ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸುತ್ತದೆ. ಕೊರೊನಾ ಸೋಂಕು ಅತಿಯಾಗಿ ಕಾಡಿದ್ದವರಲ್ಲಿ ಶಾರೀರಿಕ ಸಂಬಂಧದ ಇಚ್ಛೆ ಸಂಪೂರ್ಣ ಕಡಿಮೆಯಾಗುತ್ತದೆ ಎಂದು ತಜ್ಞರು ಹೇಳಿದ್ದಾರೆ. ಕೋವಿಡ್ -19 ಚಿಕಿತ್ಸೆಯ ಜೊತೆಗೆ, ರೋಗಿಗೆ ಟೆಸ್ಟೋಸ್ಟೆರಾನ್ ಮಟ್ಟಗಳ ಚಿಕಿತ್ಸೆಯೂ ಬಹಳ ಮುಖ್ಯ ಎಂದು ಸಂಶೋಧಕರು ಹೇಳುತ್ತಾರೆ. ಇದು ರೋಗಗಳ ವಿರುದ್ಧ ಹೋರಾಡುವ ರೋಗಿಗಳ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಎಂದು ಹೇಳಿದ್ದಾರೆ.