ಚಳಿಗಾಲದಲ್ಲಿ ಹಲವು ರೋಗಗಳಿಂದ ರಕ್ಷಣೆ ಪಡೆಯಬೇಕಿದ್ದರೆ ಕಡ್ಡಾಯವಾಗಿ ನೀವು ಸೀಬೆಹಣ್ಣನ್ನು ಸೇವಿಸಬೇಕು. ಇದರಿಂದ ಯಾವೆಲ್ಲ ಪ್ರಯೋಜನಗಳಿವೆ ಎಂಬುದನ್ನು ತಿಳಿಯೋಣ ಬನ್ನಿ.
ಚಳಿಗಾಲದಲ್ಲಿ ಹವಾಮಾನದ ಬದಲಾವಣೆಯಿಂದ ಕಾಡುವ ತಲೆನೋವಿಗೆ ಸೀಬೆ ಹಣ್ಣಿನ ಸೇವನೆ ಅತ್ಯುತ್ತಮ ಮದ್ದಾಗಬಲ್ಲದು. ದೀರ್ಘಕಾಲದ ತಲೆನೋವು ನಿವಾರಣೆಗೆ ಸೀಬೆಹಣ್ಣಿನ ಪೇಸ್ಟ್ ತಯಾರಿಸಿ ಹಣೆಯ ಮೇಲೆ ಹಚ್ಚಿ.
ನಾಲ್ಕಾರು ಸೀನು ಬಂದು ಮೂಗಲ್ಲಿ ನೀರು ಇಳಿದು ಉಂಟಾಗುವ ಶೀತದ ಸಮಸ್ಯೆಗೂ ಸೀಬೆ ಹಣ್ಣಿನಲ್ಲಿ ಔಷಧವಿದೆ. ಹಲ್ಲು ನೋವಿನ ನಿವಾರಣೆಗೆ ಸೀಬೆ ಎಲೆಗಳನ್ನು ಜಗಿದರೂ ಸಾಕು. ಸೀಬೆಹಣ್ಣಿನ ಎಲೆಗಳಿಂದ ತಯಾರಿಸಿದ ಕಷಾಯ ತಯಾರಿಸಿ ಬಾಯಿ ಮುಕ್ಕಳಿಸಿದರೆ ಬಾಯಿಯ ದುರ್ವಾಸನೆ ದೂರವಾಗುತ್ತದೆ.
ವಿಪರೀತ ಹೀಟ್ ಕಾರಣಕ್ಕೆ ಬಾಯಿಯಲ್ಲಿ ಬೊಕ್ಕೆ ಕಾಣಿಸಿಕೊಂಡಿದ್ದರೆ ಸೀಬೆ ಚಿಗುರಿನೊಂದಿಗೆ ನಾಲ್ಕಾರು ಜೀರಿಗೆ ಸೇರಿಸಿ ಜಗಿಯಿರಿ. ಇಲ್ಲವೇ ಇದರ ತಂಬುಳಿ ಮಾಡಿ ಊಟ ಮಾಡಿ.
ಇದರಲ್ಲಿ ನಾರಿನಂಶ ಹೇರಳವಾಗಿರುವುದರಿಂದ ಮಧುಮೇಹಿಗಳಿಗೆ ಇದು ಹೇಳಿ ಮಾಡಿಸಿದ ಹಣ್ಣು. ಸಂಧಿವಾತಕ್ಕೂ ಔಷಧವಾಗಬಲ್ಲ ಈ ಹಣ್ಣಿನ ಸೇವನೆಯಿಂದ ಮಲಬದ್ಧತೆ ಸಮಸ್ಯೆಯೂ ದೂರವಾಗುತ್ತದೆ.