ಚಳಿಗಾಲದಲ್ಲಿ ಅದರಲ್ಲೂ ಅಸ್ತಮಾ, ದಮ್ಮು ಮೊದಲಾದ ಸಮಸ್ಯೆಗಳಿಂದ ಬಳಲುವ ಮಕ್ಕಳು ಬಲು ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಾರೆ. ಈ ಸೀಸನ್ ನಲ್ಲಿ ಅವರನ್ನು ಎಷ್ಟು ಎಚ್ಚರಿಕೆಯಿಂದ ನೋಡಿಕೊಂಡರೂ ಕಡಿಮೆಯೇ.
ಎಣ್ಣೆಯಲ್ಲಿ ಕರಿದ ಅಥವಾ ಹುರಿದ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ಸಾಧ್ಯವಾದಷ್ಟು ಕಡಿಮೆ ಸೇವಿಸಲು ಕೊಡಿ. ಒಮ್ಮೆ ಕೆಮ್ಮು ಅಥವಾ ಕಫ ಕಾಣಿಸಿಕೊಂಡರೆ ಮತ್ತೆ ಹಲವು ದಿನಗಳ ತನಕ ಅದು ಮಕ್ಕಳನ್ನು ಕಾಡಿಸುತ್ತದೆ.
ಐಸ್ ಕ್ರೀಮ್, ತಣ್ಣಗಿನ ಜ್ಯೂಸ್ ಗಳಿಂದ ಕೆಲವು ದಿನಗಳ ಮಟ್ಟಿಗೆ ಮಕ್ಕಳನ್ನು ದೂರವಿಡಿ. ಮನೆಗೆ ಅಂಥಹ ವಸ್ತುಗಳನ್ನು ತರಬೇಡಿ ಅಥವಾ ಅವರ ಮುಂದೆ ನೀವು ಸೇವಿಸದಿರಿ. ಹೆಚ್ಚು ಸಿಹಿಯಾದ ವಸ್ತುಗಳನ್ನು ಸೇವಿಸಲು ಕೊಡದಿರಿ. ಇವು ರೋಗ ನಿರೋಧಕ ಶಕ್ತಿಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ.
ಅಸ್ತಮಾ ಸಮಸ್ಯೆ ಇರುವ ಮಕ್ಕಳಿಂದ ಬೆಣ್ಣೆ ಹಾಗೂ ಮೊಸರನ್ನು ಸಾಧ್ಯವಾದಷ್ಟು ದೂರವಿಡಿ. ಮಧ್ಯಾಹ್ನ ಹೊತ್ತಿಗೆ ಮಾತ್ರ ಮೊಸರೂಟ ಮಾಡಿಸಿ. ಸಂಜೆ ಹಾಗೂ ಬೆಳಿಗ್ಗೆ ಇವುಗಳನ್ನು ತಪ್ಪಿಯೂ ತಿನ್ನಲು ಕೊಡದಿರಿ.
ಸಂಸ್ಕರಿಸಿದ ಮಾಂಸಾಹಾರವನ್ನು ನೀಡದಿರಿ. ಮೊಟ್ಟೆ ಮೀನುಗಳನ್ನು ಸಣ್ಣ ಪ್ರಮಾಣದಲ್ಲಿ ಮಧ್ಯಾಹ್ನದ ಹೊತ್ತಿಗೆ ಮಾತ್ರ ನೀಡಿ.