ಉತ್ತರೆಯ ಬಿಸಿಲು ಬಂತೆಂದರೆ ಸಾಕು ಮಹಿಳೆಯರು ಫುಲ್ ಖುಷ್ ಆಗುತ್ತಾರೆ. ಕಪಾಟಿನಲ್ಲಿ ವರ್ಷಗಟ್ಟಲೆ ಮಡಚಿಟ್ಟ ರೇಷ್ಮೆ ಸೀರೆಗಳು ಅ ತಿಂಗಳ ಒಂದು ದಿನ ಮಾತ್ರ ಹೊರಬಂದು ಸೂರ್ಯನ ಬಿಸಿಲನ್ನು ಸ್ಪರ್ಶಿಸಿಕೊಂಡು ಮತ್ತೆ ಒಳಸೇರುತ್ತವೆ.
ರೇಷ್ಮೆ ಮತ್ತು ಪೀತಾಂಬರಗಳನ್ನು ತೊಳೆಯುವುದಿಲ್ಲ. ಬದಲಾಗಿ ಇಸ್ತ್ರಿ ಹಾಕಿ ಮಡಿಚಿ ಇಟ್ಟಿರುತ್ತಾರೆ. ಈ ಉತ್ತರೆಯಲ್ಲಿ ಬೀಳುವ ಬಿಸಿಲಿಗೆ ಅವುಗಳನ್ನು ಒಣಗಿಸಿದರೆ ಹೊಳಪು ಹೆಚ್ಚುತ್ತದೆ, ಅವುಗಳ ಮೇಲ್ಮೈಯಲ್ಲಿ ಕ್ರಿಮಿಕೀಟಗಳು ಕುಳಿತಿದ್ದರೆ ಅವು ಸಾಯುತ್ತವೆ ಎಂಬುದೊಂದು ನಂಬಿಕೆ. ಕ್ರಿಮಿಕೀಟಗಳನ್ನು ನಾಶ ಮಾಡುವ ಶಕ್ತಿ ಉತ್ತರೆಯ ಬಿಸಿಲಿಗಿದೆ.
ರೇಷ್ಮೆ ಸೀರೆಗಳನ್ನು ಬಿಳಿಯ ಬಟ್ಟೆಯಲ್ಲಿ ಸುತ್ತಿ ಕಪಾಟಿನಲ್ಲಿಡಿ. ನೀವು ಸುತ್ತುವ ಬಟ್ಟೆಯ ಬಣ್ಣವೂ ಲೈಟ್ ಆಗಿರಲಿ. ರೇಷ್ಮೆ ಸೀರೆಗಳನ್ನು ಕಾಟನ್ ಅಥವಾ ಫ್ಯಾನ್ಸಿ ಸೀರೆಗಳೊಂದಿಗೆ ಬೆರೆಸದೆ ಪ್ರತ್ಯೇಕವಾಗಿಡಿ.
ದೀರ್ಘಕಾಲ ಒಂದೆಡೆ ಮಡಚಿ ಇಡುವುದರಿಂದ ಫೋಲ್ಡ್ ಆದ ಜಾಗವೇ ಹರಿಯುವ ಇಲ್ಲವೇ ಬಿಚ್ಚುವ ಸಾಧ್ಯತೆಗಳಿವೆ. ಅದಕ್ಕಾಗಿ ಫೋಲ್ಡ್ ಗಳನ್ನು ಎರಡು ತಿಂಗಳಿಗೊಮ್ಮೆ ಬದಲಾಯಿಸುತ್ತಿರಿ.
ಕಾಟನ್ ಸೀರೆಗಳಾದರೆ ಹ್ಯಾಂಗರ್ ನಲ್ಲಿ ನೇತುಹಾಕಿ. ಇಸ್ತ್ರಿ ಮಾಡಿಯೇ ಕಪಾಟಿನಲ್ಲಿಡುವುದು ಹೆಚ್ಚು ಸೂಕ್ತ. ಉತ್ತಮ ಸೀರೆಗಳನ್ನು ಮನೆಯಲ್ಲಿ ತೊಳೆಯದಿರಿ. ಡ್ರೈವಾಶ್ ಗೆ ಕೊಡಿ.
ಫ್ಯಾನ್ಸಿ ಸೀರೆಗಳನ್ನು ಕಾಟನ್ ಸೀರೆಗಳ ಮೇಲೆ ಇಡಬೇಡಿ. ಫ್ಯಾನ್ಸಿ ಸೀರೆಗಳ ಭಾರದಿಂದಾಗಿ ಕಾಟನ್ ಸೀರೆಗಳು ಹಾಳಾದಾವು. ಹಾಗಾಗಿ ವಿಭಿನ್ನ ಪ್ರಕಾರದ ಸೀರೆಗಳನ್ನು ಸಾಧ್ಯವಾದಷ್ಟು ಪ್ರತ್ಯೇಕವಾಗಿಡಿ.
ಕಪಾಟಿನಲ್ಲಿ ಒಣಗಿದ ಕಹಿಬೇವಿನ ಎಲೆಗಳನ್ನು ಇಡುವುದರಿಂದ ಹುಳಹುಪ್ಪಟೆಗಳು ಬಾರದಂತೆ ತಡೆಯಬಹುದು. ಧರಿಸಿ ಬಿಚ್ಚಿದಾಕ್ಷಣ ಕಪಾಟಿನಲ್ಲಿ ಮಡಿಚಿಡದಿರಿ, ತುಸು ಹೊತ್ತು ಗಾಳಿಗೆ ಹಾಕಿ.