ನಿಮ್ಮ ಅಡುಗೆ ಮನೆಯು ಸ್ವಚ್ಛವಾಗಿದ್ದರೆ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಅಡುಗೆ ಮನೆಯನ್ನು ಸ್ವಚ್ಛಗೊಳಿಸುವುದಕ್ಕೆ ಇಲ್ಲಿ ಒಂದಷ್ಟು ಟಿಪ್ಸ್ ಇದೆ ನೋಡಿ.
ಗ್ಯಾಸ್ ಸ್ಟೌವ್ ನಲ್ಲಿ ಚಹಾ ಅಥವಾ ಸಾಂಬಾರು ಕುದಿಯುವ ವೇಳೆ ಚೆಲ್ಲಿ ಬದಿಯಲ್ಲಿ ಸಿಲುಕಿಕೊಂಡು ನಿಧಾನಕ್ಕೆ ಅದು ಸೋಂಕುಗಳ ಉತ್ಪಾದನಾ ತಾಣವಾಗಬಹುದು. ಹಾಗಾಗಿ ಪ್ರತಿ ರಾತ್ರಿ ಸೋಪಿನ ನೀರು ಬಳಸಿ ಒಲೆ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಅಡುಗೆ ಮಾಡುವಾಗಲೇ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ.
ತರಕಾರಿ ಅಥವಾ ಹಣ್ಣುಗಳು ಇಡುವ ಜಾಗವನ್ನು ನಿತ್ಯ ಸ್ವಚ್ಛಗೊಳಿಸುವುದು ಬಹಳ ಮುಖ್ಯ. ಇದು ಕೂಡಾ ಸೋಂಕುಕಾರಕ ಸ್ಥಳವಾಗಬಹುದು. ತರಕಾರಿ ಹೆಚ್ಚುವ ಬೋರ್ಡ್ ನ ಮೇಲ್ಮೈಯನ್ನು ನೀರಿನಿಂದ ತೊಳೆದ ಬಳಿಕ ಕನಿಷ್ಠ ಎರಡು ದಿನಕ್ಕೊಮ್ಮೆಯಾದರೂ ಉಪ್ಪು ಮತ್ತು ನಿಂಬೆ ನೀರಿನ ಮಿಶ್ರಣ ಬೆರೆಸಿ ಸ್ವಚ್ಛಗೊಳಿಸಿ.
ಮಾಲ್ ಗಳಿಂದ ತರುವ ತರಕಾರಿ, ಹಣ್ಣು ಅಥವಾ ಸೊಪ್ಪುಗಳನ್ನು ಸ್ವಚ್ಛ ಮಾಡಿಯೇ ತೆಗೆದಿಡಿ. ಹಿಟ್ಟಿನ ಡಬ್ಬಿಗಳನ್ನು ಗಾಳಿಯಾಡಲು ಬಿಡದೆ ತಕ್ಷಣ ಮುಚ್ಚಿಡಿ.
ವಿದ್ಯುತ್ ಉಪಕರಣಗಳಾದ ಮಿಕ್ಸಿ, ಫ್ರಿಜ್, ಓವನ್, ಗ್ರಿಲ್, ಬ್ಲೆಂಡರ್ ಎಲ್ಲವನ್ನೂ ಸ್ವಚ್ಛವಾಗಿಟ್ಟುಕೊಳ್ಳುವುದು ಬಹಳ ಮುಖ್ಯ. ಒಮ್ಮೆ ಬಳಸಿದ ಬಳಿಕ ಸ್ವಚ್ಛವಾಗಿ ತೊಳೆದಿಡದಿದ್ದಲ್ಲಿ ಹಲವು ರೋಗಗಳನ್ನು ಹರಡುವ ತಾಣವಾಗಬಹುದು. ಹಾಗಾಗಿ ಇವುಗಳ ಬಗ್ಗೆ ಎಚ್ಚರ ವಹಿಸಿ.