ಇದು ಸಖತ್ ರಿಚ್ ಆಗಿರೋ ತಿನಿಸು. ತಂದೂರಿ ರೊಟ್ಟಿ, ಗಾರ್ಲಿಕ್ ನಾನ್, ಜೀರಾ ರೈಸ್ ಹಾಗೂ ಪಲಾವ್ ಜೊತೆಗೆ ಸವಿಯಲು ಚೆನ್ನಾಗಿರುತ್ತದೆ.
ಪನೀರ್ ಮತ್ತು ಬೆಣ್ಣೆ ತುಂಬಾ ಒಳ್ಳೆಯ ಕಾಂಬಿನೇಷನ್. ಎಲ್ಲಾದ್ರೂ ಪಿಕ್ ನಿಕ್ ಹೋಗುವಾಗ ರೊಟ್ಟಿ ಜೊತೆಗೆ ಪನೀರ್ ಬಟರ್ ಮಸಾಲಾ ಇದ್ರೆ ಚೆನ್ನ. ಖಾರ ಕಡಿಮೆಯಾದ್ರೂ ರುಚಿ ಮಾತ್ರ ಅದ್ಭುತವಾಗಿರುತ್ತದೆ.
ಬೇಕಾಗುವ ಸಾಮಗ್ರಿ:
2 ಚಮಚ ಬೆಣ್ಣೆ, ಹೆಚ್ಚಿದ ಒಂದು ಈರುಳ್ಳಿ, ಸಣ್ಣದಾಗಿ ಹೆಚ್ಚಿದ 2 ಟೊಮೆಟೋ, ಒಂದು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್, 15 ಗೋಡಂಬಿ, ಲವಂಗದ ಎಲೆ, 3 ಲವಂಗ, ಒಂದು ಇಂಚು ಚಕ್ಕೆ, ಅರ್ಧ ಚಮಚ ಅರಿಶಿನ, ಒಂದು ಚಮಚ ಕೆಂಪು ಮೆಣಸಿನ ಪುಡಿ, ಅರ್ಧ ಚಮಚ ದನಿಯಾ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಕಾಲು ಕಪ್ ಕ್ರೀಮ್, 9 ಪನೀರ್ ತುಣುಕುಗಳು, ಕಾಲು ಚಮಚ ಗರಂ ಮಸಾಲ, ಒಂದು ಚಮಚ ಒಣ ಮೆಂತ್ಯ ಸೊಪ್ಪಿನ ಪುಡಿ.
ಮಾಡುವ ವಿಧಾನ:
ದೊಡ್ಡ ಬಾಣಲೆ ತೆಗೆದುಕೊಂಡು ಒಂದು ಚಮಚ ಬೆಣ್ಣೆ ಹಾಕಿ ಅದು ಕರಗಿದ ಬಳಿಕ ಹೆಚ್ಚಿದ ಈರುಳ್ಳಿ ಮತ್ತು ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ. ನಂತರ ಟೊಮೆಟೋ ಹಾಗೂ ಗೋಡಂಬಿಯನ್ನು ಹಾಕಿ ಹುರಿಯಿರಿ.
ಅದು ತಣ್ಣಗಾದ ಮೇಲೆ ಸ್ವಲ್ಪ ನೀರು ಬೆರೆಸಿಕೊಂಡು ಮಿಕ್ಸಿಯಲ್ಲಿ ಪೇಸ್ಟ್ ಮಾಡಿಟ್ಟುಕೊಳ್ಳಿ. ನಂತರ ಬಾಣಲೆಯಲ್ಲಿ ಒಂದು ಚಮಚ ಬೆಣ್ಣೆ ಹಾಕಿ ಅದು ಬಿಸಿಯಾದ ಮೇಲೆ ಲವಂಗದ ಎಲೆ, ಲವಂಗ ಹಾಗೂ ಚಕ್ಕೆಯನ್ನು ಹಾಕಿ ಹುರಿಯಿರಿ.
ಅದಕ್ಕೆ ಅರಿಶಿನ ಹಾಗೂ ಕೆಂಪು ಮೆಣಸಿನ ಪುಡಿ ಬೆರೆಸಿ ಸಣ್ಣ ಉರಿಯಲ್ಲಿ 20 ಸೆಕೆಂಡ್ ಇಡಿ. ನಂತರ ನೀವು ತಯಾರಿಸಿಟ್ಟುಕೊಂಡ ಈರುಳ್ಳಿ-ಟೊಮೆಟೋ ಪೇಸ್ಟ್ ಬೆರೆಸಿ.
5 ನಿಮಿಷಗಳವರೆಗೆ ಮಗುಚಿ. ನಂತರ ಬಾಣಲೆಗೆ ಪ್ಲೇಟ್ ಮುಚ್ಚಿ 10 ನಿಮಿಷ ಹಾಗೇ ಬಿಡಿ. ನಂತರ ದನಿಯಾ ಪುಡಿ ಮತ್ತು ಉಪ್ಪನ್ನು ಬೆರೆಸಿ. 5 ನಿಮಿಷ ಕೈಯಾಡಿಸಿ ಬಳಿಕ ಕ್ರೀಮ್ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಪನೀರ್ ತುಂಡುಗಳನ್ನು ಹಾಕಿ ನಿಧಾನವಾಗಿ ಗ್ರೇವಿ ಜೊತೆಗೆ ಮಿಕ್ಸ್ ಮಾಡಿ. ಕಡಾಯಿಯನ್ನು ಮುಚ್ಚಿ ಸಣ್ಣ ಉರಿಯಲ್ಲಿ 5 ನಿಮಿಷ ಹಾಗೇ ಇಡಿ. ಕೊನೆಯಲ್ಲಿ ಗರಂ ಮಸಾಲಾ ಹಾಗೂ ಒಣ ಮೆಂತ್ಯ ಸೊಪ್ಪಿನ ಪುಡಿಯನ್ನು ಬೆರೆಸಿ ಮಿಕ್ಸ್ ಮಾಡಿದ್ರೆ ರುಚಿಯಾದ ಪನೀರ್ ಬಟರ್ ಮಸಾಲಾ ರೆಡಿ.