ರಸಂ ಅಥವಾ ತಿಳಿ ಸಾರು ಇಲ್ಲದ ಊಟ ಏನಿದ್ದರೂ ಸಪ್ಪೆಯೇ! ಊಟದಲ್ಲಿ ರುಚಿಯನ್ನು ಜತೆಗೆ ಅರೋಗ್ಯಕ್ಕೂ ಹಿತಕರವಾದ ರಸಂ ಅನ್ನು ಶೀಘ್ರವಾಗಿ ತಯಾರಿಸಲು ರಸಂ ಪೌಡರ್ ತಯಾರಿಸಿಟ್ಟುಕೊಳ್ಳುವುದು ಸೂಕ್ತ. ಹಾಗಾಗಿ ರಸಂ ಪುಡಿಯನ್ನು ತಯಾರಿಸುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಗ್ರಿ:
ಒಣ ಮೆಣಸಿನ ಕಾಯಿ- ಒಂದು ಬಟ್ಟಲು, ಕೊತ್ತಂಬರಿ ಬೀಜ- ಅರ್ಧ ಬಟ್ಟಲು, ಕಾಳು ಮೆಣಸು- ಒಂದು ದೊಡ್ಡ ಚಮಚ, ಮೆಂತ್ಯ- ಅರ್ಧ ಚಮಚ, ಜೀರಿಗೆ- ಒಂದು ದೊಡ್ಡ ಚಮಚ, ಕರಿಬೇವು- ಒಂದು ಬಟ್ಟಲು, ಅರಿಶಿಣ- ಒಂದು ಚಿಕ್ಕ ಚಮಚ, ಇಂಗು- ಒಂದು ಚಿಕ್ಕ ಚಮಚ. ಎಣ್ಣೆ- ಅರ್ಧ ಚಮಚ
ತಯಾರಿಸುವ ವಿಧಾನ:
ಮೊದಲು ಬಾಣಲೆಗೆ ಮೆಣಸಿನಕಾಯಿ, ಕೊತ್ತಂಬರಿ ಬೀಜ, ಜೀರಿಗೆ, ಕಾಳು ಮೆಣಸು, ಮೆಂತ್ಯ ಮತ್ತು ಕರಿಬೇವು ಹಾಕಿ ಕಡಿಮೆ ಉರಿಯಲ್ಲಿ ಹತ್ತರಿಂದ ಹದಿನೈದು ನಿಮಿಷಗಳವರೆಗೆ ಚೆನ್ನಾಗಿ ಹುರಿಯಬೇಕು.
ಹುರಿದ ನಂತರ ನಂತರ ಅದಕ್ಕೆ ಅರಿಶಿಣ, ಇಂಗು ಮತ್ತು ಎಣ್ಣೆ ಹಾಕಿ, ಸ್ಟೌವ್ ಆರಿಸಿ, ಈಗ ಎಲ್ಲವನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು. ಆಮೇಲೆ ಸ್ವಲ್ಪ ಹೊತ್ತು ಹಾಗೆಯೇ ತಣ್ಣಗಾಗಲು ಬಿಟ್ಟು ತಣ್ಣಗಾದ ಬಳಿಕ, ಅದನ್ನು ಮಿಕ್ಸಿಯಲ್ಲಿ ಹಾಕಿ ನುಣ್ಣಗೆ ಪುಡಿ ಮಾಡಿಕೊಂಡು ಗಾಳಿಯಾಡದ ಡಬ್ಬದಲ್ಲಿ ತುಂಬಿಡಿ. ರಸಂ ತಯಾರಿಸುವ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಷ್ಟು ಸಾಮಗ್ರಿ ಬಳಸಿದರೆ ಘಮಘಮಿಸುವ ರಸಂ ಸಿದ್ದವಾಗುತ್ತದೆ.