ಮಕ್ಕಳಿಗೆ ತರಕಾರಿ ತಿನ್ನಿಸೋದು ಕಷ್ಟ. ಹಾಗಾಗಿ ತರಕಾರಿಯನ್ನ ನೇರವಾಗಿ ಕೊಡುವ ಬದಲು ಹೆಲ್ದಿ ಹಾಗೂ ಟೇಸ್ಟಿಯಾಗಿರೋ ಸ್ನಾಕ್ಸ್ ಮಾಡಿಕೊಡಿ. ಸಂಜೆ ಮಗುವಿಗೆ ರುಚಿಕರ ಬೀಟ್ ರೂಟ್ ಕಟ್ಲೆಟ್ ಮಾಡಿ ಕೊಡಬಹುದು.
ಬೇಕಾಗುವ ಸಾಮಗ್ರಿ : 2 ಕಪ್ ತುರಿದ ಬೀಟ್ ರೂಟ್, ಸಣ್ಣಗೆ ಹೆಚ್ಚಿದ ಅರ್ಧ ಈರುಳ್ಳಿ, ಕಾಲು ಚಮಚ ಅರಿಶಿನ, 1 ಚಮಚ ಅಚ್ಚಖಾರದ ಪುಡಿ, ಕಾಲು ಚಮಚ ಜೀರಿಗೆ ಪುಡಿ, ಹೆಚ್ಚಿದ ಕೊತ್ತಂಬರಿ ಸೊಪ್ಪು ಸ್ವಲ್ಪ, ಅರ್ಧ ಚಮಚ ಗರಂ ಮಸಾಲ, ಅರ್ಧ ಚಮದ ಆಮ್ಚೂರ್ ಪೌಡರ್, ಬೇಯಿಸಿ ಮ್ಯಾಶ್ ಮಾಡಿದ 1 ಆಲೂಗಡ್ಡೆ, ಅರ್ಧ ಚಮಚ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಕಾಲು ಕಪ್ ನಷ್ಟು ಬ್ರೆಡ್ ಪುಡಿ.
2 ಚಮಚ ಕಾರ್ನ್ ಫ್ಲೋರ್, 1 ಚಮಚ ಮೈದಾ ಹಿಟ್ಟು, ಅರ್ಧ ಚಮಚ ಕಾಳು ಮೆಣಸಿನ ಪುಡಿ, ಉಪ್ಪು, ನೀರು, 1 ಕಪ್ ಬ್ರೆಡ್ ಪುಡಿ ಮತ್ತು ಕರಿಯಲು ಎಣ್ಣೆ.
ಮಾಡುವ ವಿಧಾನ : ತುರಿದ ಬೀಟ್ ರೂಟ್ ಅನ್ನು ಚೆನ್ನಾಗಿ ಹಿಂಡಿ ನೀರಿನ ಅಂಶ ತೆಗೆಯಿರಿ. ಅದಕ್ಕೆ ಆಲೂಗಡ್ಡೆ ಸೇರಿಸಿ. ನಂತರ ಈರುಳ್ಳಿ, ಅರಿಶಿನ, ಅಚ್ಚಖಾರದ ಪುಡಿ, ಜೀರಿಗೆ ಪುಡಿ, ಕೊತ್ತಂಬರಿ ಸೊಪ್ಪು, ಗರಂ ಮಸಾಲ, ಆಮ್ಚೂರ್ ಪೌಡರ್, ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬ್ರೆಡ್ ಪುಡಿ ಎಲ್ಲವನ್ನೂ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಅದನ್ನು ಉಂಡೆಗಳನ್ನಾಗಿ ಮಾಡಿ, ಕೈಯಲ್ಲೇ ವಡೆಯ ಆಕಾರಕ್ಕೆ ತಟ್ಟಿ. ಇನ್ನೊಂದು ಬೌಲ್ ನಲ್ಲಿ ಕಾರ್ನ್ ಫ್ಲೋರ್, ಮೈದಾ ಹಿಟ್ಟು, ಕಾಳು ಮೆಣಸಿನ ಪುಡಿ, ಉಪ್ಪು, ನೀರು ಸೇರಿಸಿ ಹದವಾಗಿ ಕಲಸಿ. ತಟ್ಟಿಟ್ಟುಕೊಂಡಿರೋ ಬೀಟ್ ರೂಟ್ ಮಿಶ್ರಣವನ್ನು ಈ ಹಿಟ್ಟಿನಲ್ಲಿ ಅದ್ದಿ.
ನಂತರ ಬ್ರೆಡ್ ಪುಡಿಯಲ್ಲಿ ಅದ್ದಿಕೊಳ್ಳಿ. ಎರಡೂ ಬದಿಯಲ್ಲಿ ಬ್ರೆಡ್ ಕ್ರಂಬ್ಸ್ ಅಂಟಿಕೊಳ್ಳಬೇಕು. ನಂತರ ಅವನ್ನೆಲ್ಲ ಬಿಸಿಬಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೂ ಕರಿಯಿರಿ. ಸಾಸ್ ಜೊತೆಗೆ ಸವಿಯಲು ಬೀಟ್ ರೂಟ್ ಕಟ್ಲೆಟ್ ಸಿದ್ಧವಾಗುತ್ತದೆ.