ದೋಸೆಗಳಲ್ಲಿ ನಾನಾ ವಿಧ. ಮಸಾಲೆ, ಸೆಟ್, ಪೇಪರ್ ದೋಸೆ ಹೀಗೆ ಹತ್ತು ಹಲವು ವಿಧದ ದೋಸೆಗಳನ್ನು ನೋಡಬಹುದಾಗಿದೆ.
ಸುಲಭವಾಗಿ ಮಾಡಬಹುದಾದ ಚಿರೋಟಿ ರವೆ ದೋಸೆ ಕುರಿತಾದ ಮಾಹಿತಿ ಇಲ್ಲಿದೆ. ನೀವೂ ಒಮ್ಮೆ ಟ್ರೈ ಮಾಡಿ.
ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ-500 ಗ್ರಾಂ, ಮೈದಾ-250 ಗ್ರಾಂ, ಉದ್ದಿನ ಹಿಟ್ಟು-250 ಗ್ರಾಂ, ಉಪ್ಪು-2 ಚಮಚ, ಮಸಾಲೆ ಪುಡಿ-50 ಗ್ರಾಂ, ಖಾರದ ಪುಡಿ-5 ಚಮಚ, ಜೀರಿಗೆ-25 ಗ್ರಾಂ, ನೀರು-2 ಲೀಟರ್, ಎಣ್ಣೆ-250 ಗ್ರಾಂ.
ತಯಾರಿಸುವ ವಿಧಾನ:
ಚಿರೋಟಿ ರವೆಯನ್ನು ಎಣ್ಣೆಯಲ್ಲಿ 3 ನಿಮಿಷ ಹುರಿದುಕೊಂಡು ಉಳಿದ ಪದಾರ್ಥಗಳೊಂದಿಗೆ ಒಂದು ಸ್ಟೀಲ್ ಪಾತ್ರೆಯಲ್ಲಿ ಹಾಕಿ ನೀರಿನೊಂದಿಗೆ ಕಲೆಸಿರಿ.
ದೋಸೆ ಹಿಟ್ಟು ತಯಾರಾದ ನಂತರ 15 ನಿಮಿಷ ಇಡಿ. ಕಾವಲಿಯನ್ನು ಒಲೆಯ ಮೇಲಿಟ್ಟು ಕಾಯಿಸಿಕೊಂಡು ಸ್ವಲ್ಪ ನೀರು ಚಿಮುಕಿಸಿದ ನಂತರ 2 ಚಮಚ ಎಣ್ಣೆಯನ್ನು ಕಾವಲಿ ಮೇಲೆ ಹಾಕಿರಿ.
ಸೌಟಿನಿಂದ ಹಿಟ್ಟು ತೆಗೆದುಕೊಂಡು ತೆಳುವಾಗಿ ಕಾವಲಿ ಮೇಲೆ ದೋಸೆ ಹಾಕಿರಿ. ದೋಸೆ ಬೇಯುವ ಸಂದರ್ಭದಲ್ಲಿ ಚಮಚದಿಂದ ಸುತ್ತಲೂ ಎಣ್ಣೆ ಹಾಕಿ.
ಎರಡೂ ಬದಿಯಲ್ಲಿ ಬೆಂದ ನಂತರ ದೋಸೆಯನ್ನು ಕಾವಲಿಯಿಂದ ತೆಗೆದು ತಟ್ಟೆಗೆ ಹಾಕಿ. ಕೊಬ್ಬರಿ ಚಟ್ನಿ, ತರಕಾರಿ ಸಾಗು ಜೊತೆಗೆ ದೋಸೆ ತಣ್ಣಗಾಗುವ ಮೊದಲೇ ಬಡಿಸಿರಿ.