ಮಾವಿನ ಸೀಸನ್ ಬಂದಿದೆ. ಹಣ್ಣುಗಳ ರಾಜ ಮಾವಿನ ಹಣ್ಣು ಆರೋಗ್ಯಕ್ಕೆ ಎಷ್ಟು ಹಿತವೋ ತಿನ್ನಲು ಕೂಡ ಅಷ್ಟೇ ರುಚಿ. ಸಾಮಾನ್ಯವಾಗಿ ನಾವು ಮಾವಿನ ಕಾಯಿಗಿಂತ ಹಣ್ಣಿನ ಬಳಕೆಯನ್ನು ಹೆಚ್ಚು ಮಾಡುತ್ತೇವೆ. ಆದರೆ ಮಾವಿನ ಕಾಯಿಯಿಂದ ಕೂಡ ಅನೇಕ ರುಚಿಕರ ಖಾದ್ಯಗಳನ್ನು ಮಾಡಬಹುದು. ಅಂತಹ ಒಂದು ಅಡುಗೆಯೆಂದರೆ, ಮಾವಿನಕಾಯಿಯ ತಂಬುಳಿ.
ಬೇಕಾಗುವ ಸಾಮಗ್ರಿಗಳು:
ಮಾವಿನಕಾಯಿ, ತೆಂಗಿನತುರಿ, ಉಪ್ಪು, ಕರಿಬೇವು, ಸಾಸಿವೆ, ಎಣ್ಣೆ, ಹಸಿ ಮೆಣಸು, ಮಜ್ಜಿಗೆ
ಮಾಡುವ ವಿಧಾನ:
ಮಾವಿನ ಕಾಯಿಯ ಸಿಪ್ಪೆ ತೆಗೆದುಕೊಂಡು ಚಿಕ್ಕದಾಗಿ ಹೆಚ್ಚಿಕೊಳ್ಳಬೇಕು. ಹೆಚ್ಚಿದ ಮಾವಿನ ಕಾಯಿ ಮತ್ತು ತೆಂಗಿನ ತುರಿಗೆ ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಬೇಕು. ಒಂದು ಬಾಣಲೆಯಲ್ಲಿ ಸ್ವಲ್ಪ ಎಣ್ಣೆ, ಸಾಸಿವೆ, ಹಸಿ ಮೆಣಸು ಹಾಗೂ ಕರಿಬೇವು ಹಾಕಿ ಒಗ್ಗರಣೆ ಸಿದ್ಧಪಡಿಸಿಕೊಂಡು, ಅದನ್ನು ರುಬ್ಬಿಟ್ಟುಕೊಂಡ ಮಿಶ್ರಣಕ್ಕೆ ಹಾಕಬೇಕು. ನಂತರ ರುಚಿಗೆ ತಕ್ಕಷ್ಟು ಉಪ್ಪು ಹಾಗೂ ಸ್ವಲ್ಪ ಮಜ್ಜಿಗೆಯನ್ನು ಹಾಕಿದರೆ ರುಚಿಯಾದ ಮಾವಿನ ಕಾಯಿಯ ತಂಬುಳಿ ಅನ್ನದೊಂದಿಗೆ ಸವಿಯಲು ಸಿದ್ಧ. ಬೇಸಿಗೆಯಲ್ಲಿ ಇದರ ಸೇವನೆ ಆರೋಗ್ಯಕ್ಕೆ ಒಳ್ಳೆಯದು.