ಭಾರತದಾದ್ಯಂತ ಪಕೋಡಾ ಅತ್ಯಂತ ಜನಪ್ರಿಯ ಸ್ನಾಕ್ಸ್ ನಲ್ಲೊಂದು. ಗಲ್ಲಿಗಲ್ಲಿಯಲ್ಲೂ ಪಕೋಡಾ, ಭಜ್ಜಿ ಅಂಗಡಿಗಳಿವೆ. ಆದ್ರೆ ಇದು ಅದೆಲ್ಲಕ್ಕಿಂತಲೂ ಸ್ಪೆಷಲ್ ಆಗಿರೋ ಗೆಣಸಿನ ಪಕೋಡಾ. ಚಟ್ನಿ ಜೊತೆ ಇದನ್ನು ಸರ್ವ್ ಮಾಡಬಹುದು, ಅಥವಾ ಚಹಾ, ಕಾಫಿ ಜೊತೆಗೆ ಹಾಗೇ ಸವಿಯಲು ಕೂಡ ಚೆನ್ನಾಗಿರುತ್ತದೆ.
ಬೇಕಾಗುವ ಸಾಮಗ್ರಿ : ಒಂದು ಸಿಹಿಗೆಣಸು, ಒಂದು ಕಪ್ ಕಡಲೆ ಹಿಟ್ಟು, 2 ಚಮಚ ಅಕ್ಕಿಹಿಟ್ಟು, ಅರ್ಧ ಚಮಚ ಅರಿಶಿನ, 1 ಚಮಚ ಅಚ್ಚಖಾರದ ಪುಡಿ, ಚಿಟಿಕೆ ಬೇಕಿಂಗ್ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ನೀರು.
ಮಾಡುವ ವಿಧಾನ: ಸಿಹಿಗೆಣಸನ್ನು ಚೆನ್ನಾಗಿ ತೊಳೆದು ಸಿಪ್ಪೆ ತೆಗೆದುಕೊಳ್ಳಿ. ನಂತರ ಅದನ್ನು ತೆಳ್ಳಗಿನ ಸ್ಲೈಸ್ ಗಳಾಗಿ ಕತ್ತರಿಸಿ. ಒಂದು ಬೌಲ್ ನಲ್ಲಿ ಕಡಲೆಹಿಟ್ಟು, ಅಕ್ಕಿಹಿಟ್ಟು, ಅರಿಶಿನ, ಅಚ್ಚಖಾರದ ಪುಡಿ, ಚಿಟಿಕೆ ಸೋಡಾ, ಉಪ್ಪು ಮತ್ತು ನೀರನ್ನು ಬೆರೆಸಿ ಹಿಟ್ಟನ್ನು ಕಲೆಸಿಕೊಳ್ಳಿ. ಹಿಟ್ಟು ತುಂಬಾ ತೆಳುವಾಗಿರಬಾರದು, ಜೊತೆಗೆ ಉಂಡೆಯಾಗದಂತೆ ಕಲೆಸಿ. ಸ್ಲೈಸ್ ಮಾಡಿಟ್ಟ ಗೆಣಸನ್ನು ಈ ಹಿಟ್ಟಿನಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ರುಚಿಯಾದ ಸಿಹಿಗೆಣಸಿನ ಪಕೋಡಾ ಸವಿಯಲು ಸಿದ್ಧ.