ಅಪ್ಪೆ ಹುಳಿ ಅಥವಾ ನೀರ್ಗೊಜ್ಜು ಶಿವಮೊಗ್ಗ ಮತ್ತು ಉತ್ತರ ಕನ್ನಡ ಜಿಲ್ಲೆಯ ಹವ್ಯಕರ ಮನೆಗಳಲ್ಲಿ ಮಾಡುವ ಸಾರಿನಂತಹ ವಿಶಿಷ್ಟ ಪದಾರ್ಥ. ಸ್ವಲ್ಪ ಹುಳಿಯಾಗಿದ್ದು ವಿಶೇಷ ರುಚಿ ಹೊಂದಿರುವ ಈ ಪದಾರ್ಥವನ್ನು ಹೆಚ್ಚಾಗಿ ಮಾವಿನಕಾಯಿಯ ಪ್ರಬೇಧವಾದ ಅಪ್ಪೆಕಾಯಿಯಿಂದ ಮಾಡುವುದರಿಂದ ‘ಅಪ್ಪೆಹುಳಿ’ ಎಂದು ಹೆಸರು ಬಂದಿದೆ.
ಆದರೆ ಇದನ್ನು ಅಪ್ಪೆಕಾಯಿ ಮಾತ್ರವಲ್ಲದೇ ನಿಂಬೆಹಣ್ಣು, ಬಿಂಬಳ ಕಾಯಿ, ಕಂಚಿಕಾಯಿಯಿಂದ ಕೂಡ ತಯಾರಿಸಬಹುದಾಗಿದ್ದು ಊಟದಲ್ಲಿ ರುಚಿಯನ್ನೂ, ಆರೋಗ್ಯಕ್ಕೆ ಹಿತವನ್ನೂ ನೀಡುವ ಪದಾರ್ಥವಾಗಿದೆ.
ಬೇಕಾಗುವ ಸಾಮಗ್ರಿ:
ಅಪ್ಪೆಕಾಯಿ, ನಿಂಬೆ ಹಣ್ಣು, ಬಿಂಬಳ ಕಾಯಿ, ಕಂಚೀ ಕಾಯಿ(ಯಾವುದಾದರೂ ಒಂದು ಬಗೆ), ನೀರು, ಉಪ್ಪು, ಸಕ್ಕರೆ, ಕೊಬ್ಬರಿ ಎಣ್ಣೆ, ಸಾಸಿವೆ, ಇಂಗು, ಒಣಮೆಣಸು ಅಥವಾ ಹಸಿಮೆಣಸು.
ಮಾಡೋದು ಹೇಗೆ..?
ಮಾವಿನಕಾಯಿ ಸಿಪ್ಪೆ ತೆಗೆದು ಕತ್ತರಿಸಿ ಚೆನ್ನಾಗಿ ಬೇಯಿಸಬೇಕು. ಬಿಸಿ ಆರಿದ ನಂತರ ಚೆನ್ನಾಗಿ ಕಿವುಚಿ ಅದಕ್ಕೆ ತಕ್ಕಷ್ಟು ನೀರು, ಉಪ್ಪು, ಚಿಟಿಕೆ ಸಕ್ಕರೆ ಹಾಕಬೇಕು. ನಂತರ ಸಾಸಿವೆ, ಒಣ ಮೆಣಸಿನ ಚೂರು, ಇಂಗು ಹಾಕಿ ಕೊಬ್ಬರಿ ಎಣ್ಣೆಯಲ್ಲಿ ಒಗ್ಗರಣೆ ಕೊಡಿ. ಒಗ್ಗರಿಸಿದ ನಂತರ ಒಣ ಮೆಣಸನ್ನು ಸ್ವಲ್ಪ ನುರಿದರೆ ರುಚಿ ಮತ್ತಷ್ಟು ಹೆಚ್ಚುತ್ತದೆ. ಇದನ್ನು ಊಟಕ್ಕೆ ಬಳಸುವುದು ಮಾತ್ರವಲ್ಲ, ಕುಡಿಯಲೂ ಬಳಸಬಹುದು. ಇದನ್ನು ಸೇವಿಸಿದರೆ ಉತ್ತಮ ನಿದ್ರೆ ಬರುವುದರ ಜೊತೆಗೆ ದೇಹದಲ್ಲಿರುವ ಪಿತ್ತವನ್ನೂ ಕಡಿಮೆ ಮಾಡುತ್ತದೆ ಎಂಬುದು ವಿಶೇಷ.