ಯಾವುದಾದರೂ ತಿಂಡಿಗೋ ಅಥವಾ ಸಾರಿಗೆಂದು ಬೇಳೆ ಬೇಯಿಸಿಟ್ಟುಕೊಂಡಿರುತ್ತೇವೆ. ಬೇಳೆ ಬಸಿದ ನೀರನ್ನು ಹಾಗೆಯೇ ಹೊರಗೆ ಚೆಲ್ಲುವ ಬದಲು ಅದರಿಂದ ರುಚಿಕರವಾದ ಬೇಳೆ ಕಟ್ಟು ಸಾರು ಮಾಡಿ ನೋಡಿ. ಒಬ್ಬಟ್ಟು ಮಾಡಿದಾಗ ಬೇಯಿಸಿಕೊಂಡ ನೀರಿನಿಂದ ಕೂಡ ಈ ಸಾರು ಮಾಡಬಹುದು. ತಿನ್ನಲು ರುಚಿಕರವಾಗಿರುತ್ತದೆ.
ಮೊದಲಿಗೆ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ. ನಂತರ ಅದಕ್ಕೆ 4 ಒಣಮೆಣಸಿನಕಾಯಿ, ½ ಟೀ ಸ್ಪೂನ್ ಕಾಳು ಮೆಣಸು, 1 ಟೀ ಸ್ಪೂನ್ ಜೀರಿಗೆ ಹಾಕಿ ತುಸು ಫ್ರೈ ಮಾಡಿಕೊಳ್ಳಿ.
ನಂತರ ಇದಕ್ಕೆ 4 ಎಸಳು ಬೆಳ್ಳುಳ್ಳಿ, 1 ಈರುಳ್ಳಿ ಕತ್ತರಿಸಿದ್ದು ಹಾಕಿ ಹಾಗೇ 1 ಟೊಮೆಟೊ, 5 ಎಸಳು ಕರಿಬೇವು, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ ಮತ್ತೊಮ್ಮೆ ಬಾಡಿಸಿಕೊಳ್ಳಿ. ಇದಕ್ಕೆ 1 ಚಮಚ ಸಾಂಬಾರು ಪುಡಿ ಕೂಡ ಸೇರಿಸಿ ಮಿಕ್ಸ್ ಮಾಡಿ ಗ್ಯಾಸ್ ಆಫ್ ಮಾಡಿ. ಈ ಮಿಶ್ರಣ ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ನಯವಾಗಿ ರುಬ್ಬಿಕೊಳ್ಳಿ.
ಗ್ಯಾಸ್ ಮೇಲೆ ಸಾರು ಮಾಡುವ ಪಾತ್ರೆ ಇಟ್ಟು ಅದಕ್ಕೆ 1 ಚಮಚ ಎಣ್ಣೆ ಹಾಕಿ ನಂತರ ½ ಟೀ ಸ್ಪೂನ್ ಸಾಸಿವೆ, ಸ್ವಲ್ಪ ಕರಿಬೇವು 1 ಒಣ ಮೆಣಶಿನಕಾಯಿಯನ್ನು ಕತ್ತರಿಸಿ ಹಾಕಿ.
ಇದಕ್ಕೆ 2 ಟೇಬಲ್ ಸ್ಪೂನ್ ನಷ್ಟು ಹುಣಸೆಹಣ್ಣಿನ ರಸ ಸೇರಿಸಿ 2 ನಿಮಿಷಗಳ ಕಾಲ ಕುದಿಸಿ ನಂತರ ರುಬ್ಬಿಟ್ಟುಕೊಂಡ ಮಸಾಲೆ ಹಾಕಿ ಮಿಕ್ಸ್ ಮಾಡಿ. ನಂತರ ಇದಕ್ಕೆ ಬೇಳೆ ಬೇಯಿಸಿಟ್ಟುಕೊಂಡ ನೀರು ಹಾಕಿ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿಕೊಂಡರೆ ರುಚಿಕರವಾದ ಬೇಳೆ ಕಟ್ಟಿನ ಸಾರು ಸವಿಯಲು ಸಿದ್ಧ.