250 ಗ್ರಾಂ ಕಡಲೆಬೇಳೆ, 250 ಗ್ರಾಂ ಮೈದಾ ಹಿಟ್ಟು, ಬೆಲ್ಲ – 250 ಗ್ರಾಂ, 150 ಗ್ರಾಂ ಚಿರೋಟಿ ರವೆ, ಚಿಟಿಕೆ ಅರಿಶಿನ, ತೆಂಗಿನಕಾಯಿ ತುರಿ – 1/2 ಕಪ್, ಏಲಕ್ಕಿ ಪುಡಿ – 1 ಟೀ ಸ್ಪೂನ್, ಚಿಟಿಕೆ – ಉಪ್ಪು, ಸ್ವಲ್ಪ ಎಣ್ಣೆ.
ಮಾಡುವ ವಿಧಾನ:
ಮೊದಲಿಗೆ ಬೇಳೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ ನೀರು ಹಾಕಿ ಬೇಯಿಸಿಕೊಳ್ಳಿ. ಕುಕ್ಕರ್ ನಲ್ಲಿ ಬೇಯಿಸುವುದು ಬೇಡ. ಬೇಳೆ ಹದವಾಗಿ ಬೆಂದರೆ ಸಾಕು. ತುಂಬಾ ಮೆತ್ತಗೆ ಬೇಯಿಸಬೇಡಿ. ಬೇಳೆ ಬೆಂದ ಮೇಲೆ ಅದರ ನೀರನ್ನು ಬಸಿದು ಇಟ್ಟುಕೊಳ್ಳಿ.
ನಂತರ ಒಂದು ಅಗಲವಾದ ಪಾತ್ರೆಗೆ ಮೈದಾ ಹಿಟ್ಟು, ಚಿಟಿಕೆ ಅರಿಸಿನ, ಉಪ್ಪು, ರವೆ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ಸ್ವಲ್ಪ ನೀರು ಹಾಕಿ ಮೆತ್ತೆಗೆ ಕಲಸಿಕೊಳ್ಳಿ. ಇದಕ್ಕೆ ಸ್ವಲ್ಪ ಎಣ್ಣೆ ಹಾಕಿಕೊಂಡು ಚೆನ್ನಾಗಿ ನಾದಿಕೊಂಡು 1 ಗಂಟೆಗಳ ಕಾಲ ಹಾಗೆಯೇ ಇಡಿ.
ನಂತರ ಬೆಲ್ಲಕ್ಕೆ 2 ಚಮಚ ನೀರು ಹಾಕಿ ಬೆಲ್ಲವನ್ನು ಕರಗಿಸಿಕೊಳ್ಳಿ. ಇದು ಪಾಕ ಬರುವುದು ಬೇಡ. ಬೆಲ್ಲ ಕರಗಿದರೆ ಸಾಕು. ಕರಗಿಸಿಕೊಂಡ ಬೆಲ್ಲವನ್ನು ಬೇಳೆಗೆ ಹಾಕಿ 4 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಬೇಯಿಸಿಕೊಂಡು ತಣ್ಣಗಾಗುವುದಕ್ಕೆ ಬಿಟ್ಟುಬಿಡಿ.
ಇದನ್ನು ಮಿಕ್ಸಿ ಜಾರಿಗೆ ಹಾಕಿಕೊಂಡು ನುಣ್ಣಗೆ ರುಬ್ಬಿಕೊಂಡ ಹೂರಣ ಒಂದು ಬೌಲ್ ಗೆ ತೆಗೆದಿಟ್ಟುಕೊಳ್ಳಿ. ಇದಕ್ಕೆ ಏಲಕ್ಕಿ ಪುಡಿ, ತೆಂಗಿನಕಾಯಿ ತುರಿ ಕೂಡ ಸೇರಿಸಿ. ನಂತರ ಬಾಳೆಲೆಗೆ ಸ್ವಲ್ಪ ಎಣ್ಣೆ ಹಾಕಿ ಅದರ ಮೇಲೆ ಮೈದಾ ಹಿಟ್ಟಿನ ಮಿಶ್ರಣದಿಂದ ಉಂಡೆ ಮಾಡಿಕೊಂಡು ಕೈಯಿಂದ ನಿಧಾನಕ್ಕೆ ತಟ್ಟಿ. ನಂತರ ಅದರ ಮಧ್ಯೆ ಹೂರಣವಿಟ್ಟು ಮಡಚಿ ನಂತರ ಕೈಯಿಂದ ನಿಧಾನಕ್ಕೆ ಲಟ್ಟಿಸಿಕೊಳ್ಳಿ.
ತುಂಬಾ ತೆಳುವಾಗಿ ಬೇಡ. ತವಾವನ್ನು ಗ್ಯಾಸ್ ಮೇಲೆ ಇಟ್ಟು ಲಟ್ಟಿಸಿಕೊಂಡ ಒಬ್ಬಟ್ಟು ಹಾಕಿ ಎರಡೂ ಕಡೆ ಚೆನ್ನಾಗಿ ಬೇಯಿಸಿಕೊಳ್ಳಿ. ತುಪ್ಪದ ಜತೆ ಸವಿಯುವುದಕ್ಕೆ ಚೆನ್ನಾಗಿರುತ್ತದೆ.