ಸೂಪ್ ಮಾಡುವುದಕ್ಕೆ ವೆಜಿಟಬಲ್ ಸ್ಟಾಕ್ ಇದ್ದರೆ ತುಂಬಾ ಚೆನ್ನಾಗಿರುತ್ತದೆ. ಹಸಿವೆ ಆದಾಗ ಈ ಸ್ಟಾಕ್ ಗೆ ಒಂದಿಷ್ಟು ತರಕಾರಿ ಹಾಕಿಕೊಂಡು ಬೇಯಿಸಿ ಕುಡಿದುಬಿಡಬಹುದು. ಆರೋಗ್ಯಕ್ಕೂ ಸೂಪ್ ತುಂಬಾ ಒಳ್ಳೆಯದು. ದಿನಾ ಮಾಡುವ ಬದಲು ಒಂದಷ್ಟು ದಿನಗಳಿಗಾಗುವಷ್ಟು ಮನೆಯಲ್ಲಿಯೇ ಮಾಡಿಕೊಂಡು ಬೇಕಾದಾಗ ಉಪಯೋಗಿಸಿ.
ಬೇಕಾಗುವ ಸಾಮಗ್ರಿಗಳು:
ಕ್ಯಾರೆಟ್-1, ಕ್ಯಾಬೇಜ್-4 ಎಲೆ, ಬೀನ್ಸ್-8, ಈರುಳ್ಳಿ 1, ಟೊಮೆಟೊ-1, ಉಪ್ಪು-ರುಚಿಗೆ ತಕ್ಕಷ್ಟು, ಸಕ್ಕರೆ-2 ಚಿಟಿಕೆ, ನೀರು-5 ಕಪ್.
ಮಾಡುವ ವಿಧಾನ:
ಮೊದಲಿಗೆ ಗ್ಯಾಸ್ ಮೇಲೆ ಒಂದು ಅಗಲವಾದ ಪಾತ್ರೆ ಇಟ್ಟು ಅದಕ್ಕೆ ನೀರು ಸೇರಿಸಿ. ನೀರು ಕುದಿಯಲು ಶುರುವಾಗುತ್ತಿದ್ದಂತೆ ಅದಕ್ಕೆ ಚೆನ್ನಾಗಿ ತೊಳೆದು ಕತ್ತರಿಸಿಟ್ಟುಕೊಂಡ ತರಕಾರಿಗಳನ್ನು ಹಾಕಿ ಗ್ಯಾಸ್ ಉರಿ ಸಣ್ಣಗೆ ಇಟ್ಟುಕೊಂಡು 45 ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಪಾತ್ರೆಗೆ ಮುಚ್ಚಳ ಮುಚ್ಚುವುದನ್ನು ಮರೆಯದಿರಿ.
ನಂತರ ಇದರ ನೀರನ್ನು ಬೇರೊಂದು ಪಾತ್ರೆಗೆ ಸೋಸಿಕೊಳ್ಳಿ. ಇದನ್ನು ಒಂದು ಬಾಟಲಿಗೆ ತುಂಬಿಸಿಕೊಂಡು ಫ್ರಿಡ್ಜ್ ನಲ್ಲಿಡಿ. ಜಾಸ್ತಿ ದಿನ ಬಳಸುವುದಾದರೆ ಫ್ರಿಜರ್ ನಲ್ಲಿಡಿ. ಬೇಕಾದಾಗ ಉಪಯೋಗಿಸಿಕೊಂಡು ನಿಮ್ಮಿಷ್ಟದ ತರಕಾರಿ ಹಾಕಿ ಬೇಯಿಸಿಕೊಂಡು ಸೂಪ್ ಮಾಡಿ ಕುಡಿಯಿರಿ.