ರುಚಿಯಾದ ಬೇಸನ್ ಲಡ್ಡು ಎಂದರೆ ಸಿಹಿ ಇಷ್ಟಪಡುವ ಎಲ್ಲರಿಗೂ ಇಷ್ಟನೇ. ಬೇಕರಿಯಿಂದ ತಂದು ತಿನ್ನುವುದಕ್ಕಿಂತ ಮನೆಯಲ್ಲಿಯೇ ರುಚಿಯಾದ ಬೇಸನ್ ಲಡ್ಡು ತಯಾರಿಸಿಕೊಳ್ಳಿ. ಮಾಡುವ ವಿಧಾನ ಕೂಡ ಸುಲಭವಾಗಿದೆ.
ಬೇಕಾಗುವ ಸಾಮಾಗ್ರಿಗಳು: 2 ಕಪ್ ಕಡಲೆ ಹಿಟ್ಟು, 1 ½ ಕಪ್ ಸಕ್ಕರೆ, ಸ್ವಲ್ಪ ಏಲಕ್ಕಿ ಪೌಡರ್, 1 ಟೇಬಲ್ ಸ್ಪೂನ್ ನೀರು, 1 ಕಪ್ ತುಪ್ಪ.
ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಗೆ 4ಟೇಬಲ್ ಚಮಚದಷ್ಟು ತುಪ್ಪ ಹಾಕಿ. ತುಪ್ಪ ಬಿಸಿಯಾದ ತಕ್ಷಣ ಕಡಲೆಹಿಟ್ಟನ್ನು ಸ್ವಲ್ಪ ಸ್ವಲ್ಪವೇ ಹಾಕಿ ಚೆನ್ನಾಗಿ ಕೈಯಾಡಿಸುತ್ತಾ ಇರಿ. ಸಣ್ಣ ಉರಿ ಇಟ್ಟುಕೊಂಡು ಮಗಚುತ್ತಾ ಇರಿ. ತಳಹತ್ತದಂತೆ ½ ಗಂಟೆ ಕೈಯಾಡಿಸುತ್ತಾ ಇರಿ. ನಂತರ ಒಂದು ಚಮಚ ತುಪ್ಪ ಹಾಕಿ.
ಇದು ತುಸು ಗಟ್ಟಿಯಾಗುವ ಹಂತಕ್ಕೆ ಬಂದಾಗ 2 ಟೇಬಲ್ ಚಮಚ ನೀರು ಹಾಕಿ ಕೈಯಾಡಿಸಿ. ಅದು ಪದರ ಪದರವಾಗಿ ಬಿಟ್ಟುಕೊಳ್ಳುತ್ತದೆ. ಹಿಟ್ಟು ತುಸು ಗಟ್ಟಿಯಾದಾಗ ಬೇರೊಂದು ತಟ್ಟೆಗೆ ಹಾಕಿ ತಣ್ಣಗಾಗಲು ಬಿಡಿ. ಹಿಟ್ಟು ಹದ ಬಿಸಿಯಿರುವಾಗ ಅದರ ಮೇಲೆ ½ ಕಪ್ ಸಕ್ಕರೆ ಪುಡಿ ಹಾಕಿ ಹಾಗೇ 1 ಗಂಟೆ ಬಿಟ್ಟು ಬಿಡಿ. ನಂತರ ನಿಮಗೆ ಎಷ್ಟು ಸಿಹಿ ಬೇಕೋ ಅಷ್ಟು ಸಕ್ಕರೆ, ಏಲಕ್ಕಿ ಪುಡಿ ಸೇರಿಸಿಕೊಳ್ಳಿ. ಮಿಶ್ರಣವನ್ನು ಸರಿಯಾಗಿ ಕೈಯಿಂದ ಉಂಡೆ ಕಟ್ಟುವ ಹದಕ್ಕೆ ಮಾಡಿಕೊಂಡು ಹದ ಗಾತ್ರದ ಉಂಡೆ ಮಾಡಿಕೊಂಡರೆ ಬೇಸನ್ ಲಡ್ಡು ರೆಡಿ.