ಬಾಕರ್ ವಾಡಿ ತಿಂಡಿ ಎಲ್ಲರಿಗೂ ತಿಳಿದೇ ಇದೆ. ಮಹಾರಾಷ್ಟ್ರ ಮೂಲದ ಈ ಕುರುಕಲು ತಿಂಡಿಯನ್ನು ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕೆನಿಸುವ ಆಸೆ ಆಗುತ್ತದೆ.
ಸಿಹಿ ಖಾರ ಮಿಶ್ರಿತ ಈ ತಿಂಡಿಯನ್ನು ಜೋಳ ಬಳಸಿಕೊಂಡು ಕೂಡ ತಯಾರಿಸಬಹುದು. ಇಲ್ಲಿದೆ ಜೋಳದ ಬಾಕರ್ ವಾಡಿ ಮಾಡುವ ವಿವರ.
ಬೇಕಾಗುವ ಸಾಮಾಗ್ರಿಗಳು
ಮಸಾಲೆಗಾಗಿ
ಕಾಳುಮೆಣಸಿನ ಪುಡಿ – 10 ಗ್ರಾಂ
ಸಕ್ಕರೆ – 40 ಗ್ರಾಂ
ಎಳ್ಳು – 50 ಗ್ರಾಂ
ಜೀರಿಗೆ – 1/2 ಚಮಚ
ಸೋಂಪು ಕಾಳು – 1/4 ಚಮಚ
ಬಾದಾಮಿ – 3
ಧನಿಯಾ – 50 ಗ್ರಾಂ
ಉಪ್ಪು ರುಚಿಗೆ ತಕ್ಕಷ್ಟು
ಅಚ್ಚಖಾರದ ಪುಡಿ – 30 ಗ್ರಾಂ
ಚಾಟ್ ಮಸಾಲ – 1/4 ಚಮಚ
ಉದ್ದಿನಬೇಳೆ – 560 ಗ್ರಾಂ
ಗಸಗಸೆ ಪುಡಿ – 10 ಗ್ರಾಂ
ಹಿಟ್ಟಿಗಾಗಿ
ಗೋಧಿ ಹಿಟ್ಟು – 60 ಗ್ರಾಂ
ಜೋಳದ ಹಿಟ್ಟು – 50 ಗ್ರಾಂ
ಕಡಲೆಹಿಟ್ಟು – 50 ಗ್ರಾಂ
ಎಣ್ಣೆ ಕರಿಯಲು
ನೀರು ಅಗತ್ಯವಿರುವಷ್ಟು
ಮಾಡುವ ವಿಧಾನ
ಒಂದು ಕಡಾಯಿಯಲ್ಲಿ ಎಣ್ಣೆಯನ್ನು ಹಾಕದೆ ಎಳ್ಳು, ಜೀರಿಗೆ, ಸೋಂಪು, ಬಾದಾಮಿ, ಧನಿಯಾ, ಉದ್ದಿನ ಬೇಳೆಯನ್ನು ಹಾಕಿ ತಿಳಿಗಂದು ಬಣ್ಣ ಬರುವವರೆಗೆ ಹುರಿಯಬೇಕು. ಅದು ಆರಿದ ಬಳಿಕ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.
ಅದಕ್ಕೆ ಕಾಳು ಮೆಣಸಿನ ಪುಡಿ, ಉಪ್ಪು, ಅಚ್ಚಖಾರದ ಪುಡಿ, ಸಕ್ಕರೆ, ಗಸಗಸೆ ಪುಡಿ ಹಾಕಿ ಎಲ್ಲವನ್ನೂ ಮಿಕ್ಸಿಯಲ್ಲಿ ಒಂದು ಬಾರಿ ತಿರುಗಿಸಬೇಕು. ಇವುಗಳ ಜೊತೆ ಒಂದು ಚಮಚದಷ್ಟು ಕಡಲೆಹಿಟ್ಟನ್ನು ಹುರಿದು ಬೆರೆಸಿದರೆ ಬಾಕರ್ ವಾಡಿ ಮಸಾಲೆ ಸಿದ್ಧವಾದಂತೆ.
ಈಗ ಗೋಧಿ, ಜೋಳ, ಕಡಲೆ ಹಿಟ್ಟನ್ನು ಮಿಶ್ರ ಮಾಡಿಕೊಂಡು ರುಚಿಗೆ ತಕ್ಕಷ್ಟು ಉಪ್ಪು, ಅಚ್ಚ ಖಾರದ ಪುಡಿಯನ್ನು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಬೇಕು.
ಸ್ವಲ್ಪ ಹಿಟ್ಟನ್ನು ಕೈಯಲ್ಲಿ ತೆಗೆದುಕೊಂಡು ಚಪಾತಿಯಂತೆ ಲಟ್ಟಿಸಿ ಅದರ ಮೇಲೆ ಮಸಾಲೆಯನ್ನು ಸಮವಾಗಿ ಹಾಕಿ ಚಪಾತಿಯನ್ನು ಒಂದು ರೋಲ್ ನಂತೆ ಸುತ್ತಿಕೊಳ್ಳಬೇಕು. ಬಳಿಕ ಗುಂಡಗೆ ಒಂದೇ ಸಮವಾಗಿ ಕತ್ತರಿಸಿ ಆ ಉಂಡೆಗಳನ್ನು ಕಾದ ಎಣ್ಣೆಯಲ್ಲಿ ಹಾಕಿ ಕರೆದರೆ ಸಿಹಿಯಾದ ಸವಿಯಾದ ಖಾರ ಖಾರ ಜೋಳದ ಬಾಕರ್ ವಾಡಿ ಸವಿಯಲು ಸಿದ್ಧ.