ಬಿಸಿ ಅನ್ನಕ್ಕೆ ರಸಂ ಹಾಕಿಕೊಂಡು ಊಟ ಮಾಡುವುದರ ಖುಷಿಯೇ ಬೇರೆ. ಇಲ್ಲಿ ಸುಲಭವಾದ ಹಾಗೂ ಆರೋಗ್ಯಕರವಾದ ಜೀರಿಗೆ ರಸಂ ಮಾಡುವ ವಿಧಾನ ಇದೆ.
ಒಂದು ಪ್ಯಾನ್ ಅನ್ನು ಗ್ಯಾಸ್ ಮೇಲೆ ಇಟ್ಟು ಅದಕ್ಕೆ 5 ಬ್ಯಾಡಗಿ ಮೆಣಸು ಹಾಕಿ ಹುರಿಯಿರಿ. ನಂತರ ಇದಕ್ಕೆ 2 ಚಮಚದಷ್ಟು ಜೀರಿಗೆ ಹಾಕಿ ಹುರಿಯಿರಿ. ನಂತರ ಇದು ತಣ್ಣಗಾಗುವುದಕ್ಕೆ ಬಿಡಿ. ಹಾಗೇ ಒಂದು ಕುಕ್ಕರ್ ನಲ್ಲಿ ¼ ಕಪ್ ನಷ್ಟು ತೊಗರಿಬೇಳೆ ಹಾಕಿ ಅದಕ್ಕೆ ಚಿಟಿಕೆ ಅರಿಶಿನ, 1 ಟೀ ಸ್ಪೂನ್ ಎಣ್ಣೆ, ನೀರು ಹಾಕಿ 3 ವಿಷಲ್ ಕೂಗಿಸಿಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ ಮೆಣಸು, ಜೀರಿಗೆ, ಬೇಯಿಸಿದ ಬೇಳೆ ಹಾಕಿ ನಯವಾಗಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 3 ಚಮಚದಷ್ಟು ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಅದಕ್ಕೆ 1 ದೊಡ್ಡ ಟೊಮೆಟೊವನ್ನು ಚಿಕ್ಕದ್ದಾಗಿ ಕತ್ತರಿಸಿಕೊಂಡು ಹಾಕಿ. ಅದು ಚೆನ್ನಾಗಿ ಬೇಯಲಿ.
ಬಳಿಕ ಅದಕ್ಕೆ ¼ ಟೀ ಸ್ಪೂನ್ ಅರಿಶಿನ, ಉಪ್ಪು ಸೇರಿಸಿ ಮತ್ತೊಮ್ಮೆ ಕೈಯಾಡಿಸಿ. ನಂತರ ರುಬ್ಬಿದ ಮಿಶ್ರಣವನ್ನು ಇದಕ್ಕೆ ಸೇರಿಸಿ 4 ಕಪ್ ನೀರು ಹಾಕಿ ಕುದಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಗ್ಯಾಸ್ ಅಫ್ ಮಾಡಿ. ಒಂದು ಒಗ್ಗರಣೆ ಪಾತ್ರೆಯೊಂದಕ್ಕೆ 1 ಚಮಚ ಎಣ್ಣೆ ಹಾಕಿ ಅದಕ್ಕೆ ಚಿಟಿಕೆ ಸಾಸಿವೆ, 5 ಎಸಳು ಕರಿಬೇವು, ಚಿಟಿಕೆ ಇಂಗು ಹಾಕಿ ಇದನ್ನು ಸಾರಿಗೆ ಹಾಕಿದರೆ ರುಚಿಕರವಾದ ಜೀರಿಗೆ ರಸಂ ಸವಿಯಲು ಸಿದ್ಧ.