ಕೋಡುಬಳೆ ಎಂದ ಕೂಡಲೇ ಅನೇಕರಿಗೆ ಬಾಯಿಯಲ್ಲಿ ನೀರು ಬರುತ್ತದೆ. ಬೇಕೆನಿಸಿದಾಗ ತಿನ್ನಲು ಮನೆಯಲ್ಲಿಯೇ ಕೋಡುಬಳೆಯನ್ನು ಸುಲಭವಾಗಿ ಮಾಡಿಕೊಳ್ಳಬಹುದು.
ಬೇಕಾಗುವ ಪದಾರ್ಥಗಳು:
ಚಿರೋಟಿ ರವೆ-500 ಗ್ರಾಂ, ಮೊಸರು-100 ಗ್ರಾಂ, ಈರುಳ್ಳಿ-50 ಗ್ರಾಂ, ತೆಂಗಿನಕಾಯಿ-1 ಹೋಳು, ಹಸಿಮೆಣಸಿನಕಾಯಿ-6, ಅಡಿಗೆ ಸೋಡಾ- ಸ್ವಲ್ಪ, ತುಪ್ಪ-2 ಚಮಚ, ಉಪ್ಪು ಹಾಗೂ ಕರಿಯಲು ಬೇಕಾದಷ್ಟು ಎಣ್ಣೆ.
ತಯಾರಿಸುವ ವಿಧಾನ:
ಒಂದು ಬಾಣಲೆಯಲ್ಲಿ ಎರಡು ಚಮಚ ತುಪ್ಪ ಹಾಕಿ ಒಲೆಯ ಮೇಲೆ ಇಡಿ. ಕಾದ ಮೇಲೆ ಚಿರೋಟಿ ರವೆಯನ್ನು ಅದರಲ್ಲಿ ಹಾಕಿ ಉರಿದುಕೊಳ್ಳಿ. ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿಕೊಂಡು ಒಂದು ಪಾತ್ರೆಯಲ್ಲಿ ಹಾಕಿ. ಅದಕ್ಕೆ ಹುರಿದುಕೊಂಡ ರವೆ, ತೆಂಗಿನ ತುರಿ, ಕತ್ತರಿಸಿದ ಹಸಿಮೆಣಸಿನ ಕಾಯಿ, ಅಡಿಗೆ ಸೋಡಾ, ಸ್ವಲ್ಪ ಉಪ್ಪು ಮೊಸರು ಹಾಕಿ ಹದವಾಗಿ ಕಲಸಿಕೊಳ್ಳಿ.
ಬಾಣಲೆಯಲ್ಲಿ ಎಣ್ಣೆ ಹಾಕಿ ಕಾದ ಬಳಿಕ, ಹಿಟ್ಟನ್ನು ಸ್ವಲ್ಪ ತೆಗೆದುಕೊಂಡು ಕೋಡುಬಳೆ ಆಕಾರಕ್ಕೆ ಮಾಡಿಕೊಂಡು ಕರಿಯಿರಿ. ಕೆಂಪಗೆ ಕಾದ ಬಳಿಕ ಹೊರ ತೆಗೆಯಿರಿ. ನಿಮಗೆ ತಿನ್ನಲು ರುಚಿಕರವಾದ ಕೋಡುಬಳೆ ಸಿದ್ದವಾಗಿರುತ್ತವೆ.