ದಿನಾ ಇಡ್ಲಿ, ದೋಸೆ ತಿಂದು ಬೇಜಾರು ಎನ್ನುವ ಮಕ್ಕಳಿಗೆ ಒಮ್ಮೊಮ್ಮೆ ಈ ರವೆಯಿಂದ ಮಾಡಿದ ಪಡ್ಡುವನ್ನು ಮಾಡಿಕೊಡಿ. ಖುಷಿಯಿಂದ ತಿಂದು ಟಿಫಿನ್ ಖಾಲಿ ಮಾಡುತ್ತಾರೆ.
ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಿಬಿಡಬಹುದು.
ಬೇಕಾಗುವ ಸಾಮಾಗ್ರಿ-1 ಕಪ್ ರವೆ, ½ ಕಪ್-ಗಟ್ಟಿ ಮೊಸರು, 2.5 ಕಪ್-ನೀರು, ರುಚಿಗೆ ತಕ್ಕಷ್ಟು ಉಪ್ಪು. ಒಗ್ಗರಣೆಗೆ: 1 ಟೇಬಲ್ ಸ್ಪೂನ್ ಎಣ್ಣೆ, ½ ಟೀ ಸ್ಪೂನ್ ಸಾಸಿವೆ, 1 ಟೇಬಲ್ ಸ್ಪೂನ್-ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ, ಶುಂಠಿ ಸ್ವಲ್ಪ 1 ಹಸಿಮೆಣಸು ಸಣ್ಣದ್ದಾಗಿ ಕತ್ತರಿಸಿದ್ದು, -5 ಎಸಳು ಕರಿಬೇವು.
ಮಾಡುವ ವಿಧಾನ: ಒಂದು ದೊಡ್ಡ ಬೌಲ್ ಗೆ ರವೆ, ಮೊಸರು, ನೀರು, ಉಪ್ಪು ಹಾಕಿ ದೋಸೆ ಹಿಟ್ಟಿನ ಹದಕ್ಕೆ ತಯಾರಿಸಿಕೊಳ್ಳಿ. ನಂತರ ಇದನ್ನು 20 ನಿಮಿಷ ಹಾಗೇಯೇ ಮುಚ್ಚಿಡಿ. ನಂತರ ಹಿಟ್ಟಿನ ಹದ ನೋಡಿಕೊಂಡು ನೀರು ಬೇಕಿದ್ದರೆ ಸೇರಿಸಿ. ನಂತರ ಒಂದು ಒಗ್ಗರಣೆ ಪಾತ್ರೆಯನ್ನು ಒಲೆಯ ಮೇಲಿಟ್ಟು ಅದಕ್ಕೆ ಎಣ್ಣೆ ಹಾಕಿ. ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಈರುಳ್ಳಿ, ಹಸಿಮೆಣಸು, ಶುಂಠಿ, ಕರಿಬೇವು ಹಾಕಿ 1 ನಿಮಿಷ ಹಾಗೆ ತಿರುವಿಕೊಳ್ಳಿ.
ಇದನ್ನು ರವೆ ಮಿಶ್ರಣಕ್ಕೆ ಹಾಕಿ. ಪಡ್ಡು ಕಾವಲಿಗೆ ಎಣ್ಣೆ ಸವರಿ ಒಲೆಯ ಮೇಲಿಡಿ. ಈ ಹಿಟ್ಟನ್ನು ಒಂದು ಚಮಚದ ಸಹಾಯದಿಂದ ಕಾವಲಿಗೆ ಹಾಕಿ. ಎರಡು ಕಡೆ ಕಂದು ಬಣ್ಣ ಬರುವವರೆಗೆ ಕಾಯಿಸಿದರೆ ಗರಿಗರಿಯಾದ ರವಾ ಪಡ್ಡು ತಯಾರು. ಚಟ್ನಿ ಜತೆ ಸವಿಯಲು ರುಚಿಯಾಗಿರುತ್ತದೆ.