ಬಿಟ್ರೂಟ್ ಪಲ್ಯ ತುಂಬಾ ಆರೋಗ್ಯಕರವಾದದ್ದು. ಇದಕ್ಕೆ ಕಾಬೂಲ್ ಕಡಲೆಕಾಳು ಹಾಕಿ ಪಲ್ಯ ಮಾಡಿದರೆ ತುಂಬಾ ರುಚಿಕರವಾಗಿರುತ್ತದೆ. ಮಾಡುವ ವಿಧಾನ ಸುಲಭವಿದೆ. ಟ್ರೈ ಮಾಡಿ ನೋಡಿ.
¼ ಕಪ್ ಕಾಬೂಲ್ ಕಡಲೆಕಾಳನ್ನು ನೀರಲ್ಲಿ ರಾತ್ರಿಯೇ ನೆನೆಸಿಡಿ. ಮೊದಲಿಗೆ 3 ಬಿಟ್ರೂಟ್ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ಇವೆರೆಡನ್ನು ಒಂದು ಕುಕ್ಕರ್ ಗೆ ಹಾಕಿಕೊಂಡು 1 ½ ಗ್ಲಾಸ್ ನೀರು ಸೇರಿಸಿ 2 ವಿಷಲ್ ಕೂಗಿಸಿಕೊಂಡು ತಣ್ಣಗಾದ ಮೇಲೆ ಇದರ ನೀರನ್ನು ಸೋಸಿಕೊಳ್ಳಿ.
ನಂತರ ಒಂದು ಮಿಕ್ಸಿ ಜಾರಿಗೆ 4 ಹಸಿಮೆಣಸು, 3 ಎಸಳು ಬೆಳ್ಳುಳ್ಳಿ, ½ ಟೀ ಸ್ಪೂನ್ ಜೀರಿಗೆ, 1 ಟೀ ಸ್ಪೂನ್ ಕೊತ್ತಂಬರಿ ಕಾಳು, 5 ಎಸಳು ಕರಿಬೇವು, ಸಣ್ಣ ತುಂಡು ಶುಂಠಿ, ಸಣ್ಣ ಪೀಸ್ ಹುಣಸೆಹಣ್ಣು, ಸ್ವಲ್ಪ ಬೆಲ್ಲ ಹಾಕಿಕೊಂಡು ರುಬ್ಬಿಕೊಳ್ಳಿ.
ನಂತರ ಗ್ಯಾಸ್ ಮೇಲೆ ಒಂದು ಬಾಣಲೆ ಇಟ್ಟು ಅದಕ್ಕೆ 2 ಚಮಚ ಎಣ್ಣೆ ಹಾಕಿ ನಂತರ ಸಾಸಿವೆ, ಜೀರಿಗೆ ಕರಿಬೇವು ಹಾಕಿ. ಸಾಸಿವೆ ಸಿಡಿದಾಗ 1 ಈರುಳ್ಳಿ ಕತ್ತರಿಸಿಕೊಂಡು ಹಾಕಿ ಅದು ಫ್ರೈ ಆಗುತ್ತಿದ್ದಂತೆ ಅದಕ್ಕೆ ರುಬ್ಬಿಕೊಂಡ ಮಿಶ್ರಣ ಸೇರಿಸಿ ಹಸಿ ವಾಸನೆ ಹೋಗುವವರಗೆ ಹುರಿಯಿರಿ.
ನಂತರ ಬೇಯಿಸಿದ ಬಿಟ್ರೂಟ್ ಹಾಕಿ ಮಿಕ್ಸ್ ಮಾಡಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ 5 ನಿಮಿಷಗಳ ಕಾಲ ಚೆನ್ನಾಗಿ ಫ್ರೈ ಮಾಡಿಕೊಳ್ಳಿ. ನಂತರ ಇದಕ್ಕೆ 3 ಟೇಬಲ್ ಸ್ಪೂನ್ ನಷ್ಟು ಕಾಯಿತುರಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸೇರಿಸಿ 3 ನಿಮಿಷಗಳ ಕಾಲ ಮಿಕ್ಸ್ ಮಾಡಿದರೆ ರುಚಿಕರವಾದ ಬಿಟ್ರೂಟ್ ಪಲ್ಯ ರೆಡಿ.