ಲವ್ ಅಟ್ ಫಸ್ಟ್ ಸೈಟ್. ನೋಡಿದ ತಕ್ಷಣ ಪ್ರೀತಿಯಲ್ಲಿ ಬೀಳುವುದು. ಮೊದಲ ಭೇಟಿಯಲ್ಲಿಯೇ ಅವರ ನೋಟ, ಮಾತು, ನಡವಳಿಕೆ ಆಕರ್ಷಿಸುತ್ತದೆ. ಮೊದಲ ಭೇಟಿಯಲ್ಲಿ ಮನಸ್ಸು ಖುಷಿಗೊಂಡಿರುತ್ತದೆ. ಎಷ್ಟೋ ವರ್ಷಗಳ ಹಿಂದೆಯೇ ಇವರು ಪರಿಚಿತ ಎಂಬ ಭಾವ ಮೂಡುತ್ತದೆ. ಪರಸ್ಪರ ಬಿಟ್ಟಿರಲು ಸಾಧ್ಯವಿಲ್ಲವೆಂಬ ಬಾಂಧವ್ಯ ಬೆಳೆಯುತ್ತದೆ.
ಮೊದಲ ನೋಟದಲ್ಲೇ ಪ್ರೀತಿಗೆ ಬೀಳಲು ಭಾವನಾತ್ಮಕ ಮಾತ್ರವಲ್ಲ ವೈಜ್ಞಾನಿಕ ಕಾರಣವೂ ಇದೆ. ಸಂಶೋಧನೆಯಲ್ಲಿ ಆಸಕ್ತಿದಾಯಕ ಸಂಗತಿ ಹೊರ ಬಿದ್ದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದ 142 ಮಂದಿಗೆ ಬ್ಲೈಂಡ್ ಡೇಟ್ ಮಾಡಲು ಕೇಳಲಾಗಿದೆ. ಮೊದಲ ಭೇಟಿಯ ನಂತರವೇ ಕೆಲವರ ನಡುವೆ ಕೆಮೆಸ್ಟ್ರಿ ಹೇಗೆ ಬೆಳೆಯುತ್ತದೆ ಎಂಬುದನ್ನು ಅಧ್ಯಯನದಲ್ಲಿ ತಿಳಿಯುವ ಪ್ರಯತ್ನ ನಡೆದಿದೆ. ಮೊದಲ ನೋಟದಲ್ಲಿಯೇ ಪ್ರೀತಿ ಚಿಗುರಲು ಮಾನಸಿಕ ಪ್ರಕ್ರಿಯೆ ಕಾರಣ ಎಂಬುದು ಸಂಶೋಧನೆಯಲ್ಲಿ ಬಹಿರಂಗವಾಗಿದೆ.
ಈ ಪ್ರಕ್ರಿಯೆಯು ದೈಹಿಕ ಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಇಬ್ಬರ ಹೃದಯ ಒಂದೇ ವೇಗದಲ್ಲಿ ಬಡಿಯಲು ಶುರುವಾಗುತ್ತದೆ. 18 ರಿಂದ 38 ವರ್ಷ ವಯಸ್ಸಿನ ಜನರು ಬ್ಲೈಂಡ್ ಡೇಟಿಂಗ್ ನಲ್ಲಿ ಪಾಲ್ಗೊಂಡಿದ್ದರು. ಡೇಟಿಂಗ್ ವೇಳೆ ಐ ಟ್ರ್ಯಾಕಿಂಗ್ ಗ್ಲಾಸ್, ಹೃದಯ ಬಡಿತ ಮಾನಿಟರ್ ಮತ್ತು ಬೆವರು ಪರೀಕ್ಷೆ ನಡೆಸಲಾಯಿತು.
ಮೊದಲ ನೋಟದಲ್ಲೇ ಪ್ರೀತಿ ತೋರಿದ 17 ಜೋಡಿಗಳು ಗಮನ ಸೆಳೆದರು. ಈ ಜೋಡಿಗಳ ಹೃದಯ ಒಂದೇ ರೀತಿಯಲ್ಲಿ ಬಡಿದುಕೊಳ್ಳುತ್ತಿತ್ತು. ಇದನ್ನು ವಿಜ್ಞಾನಿಗಳು ಶಾರೀರಿಕ ಸಿಂಕ್ರೊನಿ ಎಂದು ಹೆಸರಿಸಿದ್ದಾರೆ. ಇದರಲ್ಲಿ ಒಂದು ರೀತಿಯ ಪ್ರಜ್ಞಾಹೀನ ಸ್ಥಿತಿಯಾಗಿದೆ. ನಾವು ಏನು ಮಾಡ್ತಿದ್ದೇವೆ ಎಂಬುದು ನಮಗೆ ತಿಳಿದಿರುವುದಿಲ್ಲ. ಮೊದಲ ನೋಟದಲ್ಲೇ ಪ್ರೀತಿಗೆ ಬಿದ್ದಾಗ ಅಂಗೈಗಳಲ್ಲಿ ಸ್ವಲ್ಪ ಬೆವರು ಬರುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.