ಒಂದು ಕಡೆ ಕೊರೊನಾ ಆದ್ರೆ ಇನ್ನೊಂದು ಕಡೆ ಒತ್ತಡ ಹೆಚ್ಚಾಗ್ತಿದೆ. ಒತ್ತಡ ಜನರ ಆರೋಗ್ಯದ ಮೇಲೆ ಪರಿಣಾಮ ಬೀರ್ತಿದೆ. ಶಾಲೆಯಿಲ್ಲದೆ, ದೈಹಿಕ ವ್ಯಾಯಾಮಗಳಿಲ್ಲದೆ ಇರುವ ಮಕ್ಕಳಲ್ಲಿಯೂ ಸಾಕಷ್ಟು ಬದಲಾವಣೆಯಾಗ್ತಿದೆ. ಅವರಲ್ಲಿಯೂ ಮಾನಸಿಕ ಒತ್ತಡ ಹೆಚ್ಚಾಗ್ತಿದೆ. ಮಕ್ಕಳ ಮಾನಸಿಕ ಒತ್ತಡ ಕಡಿಮೆ ಮಾಡುವುದು ಪಾಲಕರ ಜವಾಬ್ದಾರಿಯಾಗಿದೆ.
ಕೊರೊನಾ ಸಂದರ್ಭದಲ್ಲಿ ಎಲ್ಲರ ಮನೆಯಲ್ಲೂ ಟಿವಿ ಚಾನೆಲ್ ವೀಕ್ಷಣೆ ಮಾಡ್ತಿದ್ದಾರೆ. ಸಾಮಾಜಿಕ ಜಾಲತಾಣದಿಂದ ಹಿಡಿದು ಎಲ್ಲೆಡೆ ಕೊರೊನಾ ಸುದ್ದಿ ಹರಿದಾಡ್ತಿದೆ. ಸಾವಿನ ಸುದ್ದಿಗಳು ಮನೆಯಲ್ಲಿ ಚರ್ಚೆಯಾಗ್ತಿವೆ. ಇದು ಮಕ್ಕಳಲ್ಲಿ ಭಯ ಹುಟ್ಟಿಸಿದೆ. ಅವರಿಗೆ ಮಾನಸಿಕ ಒತ್ತಡ ಕಾಡ್ತಿದೆ. ಮಕ್ಕಳನ್ನು ಇದ್ರಿಂದ ಹೊರಗೆ ತನ್ನಿ. ಮಕ್ಕಳ ಜೊತೆ ಅಡುಗೆ ಮಾಡಿ. ಅವರ ಜೊತೆ ಆಟವಾಡಿ. ಕಥೆ ಹೇಳಿ. ಅವರ ಮನಸ್ಸು ಬದಲಾಗುವಂತೆ ನೋಡಿಕೊಳ್ಳಿ.
ಮನೆಯಲ್ಲಿ ಮಕ್ಕಳ ಮುಂದೆ ಟಿವಿ ಚಾನೆಲ್ ಹಚ್ಚಬೇಡಿ. ಮ್ಯೂಸಿಕ್ ಚಾನೆಲ್ ಅಥವಾ ಕಾರ್ಟೂನ್ ಚಾನೆಲ್ ಹಚ್ಚಿ. ಇದರಿಂದ ಅವರು ಮನರಂಜನೆ ಪಡೆಯುತ್ತಾರೆ. ಅನಾರೋಗ್ಯ ಮತ್ತು ಸಾವಿನ ಸುದ್ದಿಗಳು ಅವರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳನ್ನು ಫೋನ್‌ನಿಂದ ದೂರವಿಡಿ. ರೋಗದ ಬಗ್ಗೆ ಯಾರು ಫೋನ್ ಮಾಡಿದ್ರೂ ಅದನ್ನು ಮಕ್ಕಳ ಮುಂದೆ ಹೇಳಬೇಡಿ.
ಈ ಸಮಯದಲ್ಲಿ ಮಕ್ಕಳಿಗೆ ಆರೋಗ್ಯಕರ ಆಹಾರವನ್ನು ನೀಡಿ. ದೈಹಿಕ ಚಟುವಟಿಕೆ ಬಹಳ ಮುಖ್ಯ. ಮಕ್ಕಳಿಗೆ ವ್ಯಾಯಾಮ ಮಾಡಿಸಿ. ಕಾಲಕಾಲಕ್ಕೆ ಕೈ ತೊಳೆಯಲು ಅವರನ್ನು ಪ್ರೋತ್ಸಾಹಿಸಿ.
ಹೊರಗೆ ಹೋಗದೆ, ವಿದ್ಯಾಭ್ಯಾಸವಿಲ್ಲದೆ ಮಕ್ಕಳು ಮೊದಲೇ ಬೇಸರಗೊಂಡಿದ್ದಾರೆ. ಈ ಸಂದರ್ಭದಲ್ಲಿ ಮಕ್ಕಳನ್ನು ಮತ್ತಷ್ಟು ಬೇಸರಗೊಳಿಸಬೇಡಿ. ಅವರ ಮೇಲೆ ಅನವಶ್ಯಕ ಕೂಗಾಡಬೇಡಿ. ಹೊಡೆಯುವ ಬದಲು ಮಕ್ಕಳಿಗೆ ಪ್ರೀತಿಯಿಂದ ಬುದ್ದಿ ಹೇಳಿ.
ವಿಡಿಯೋ ಕಾಲ್ ಮೂಲಕ ಮಕ್ಕಳು ಸ್ನೇಹಿತರ ಜೊತೆ ಮಾತನಾಡಲು ಅವಕಾಶ ನೀಡಿ. ಇದು ಮಕ್ಕಳ ಮನಸ್ಸನ್ನು ಬದಲಿಸುತ್ತದೆ. ಸ್ನೇಹಿತರ ಜೊತೆ ಮಾತನಾಡುವುದ್ರಿಂದ ಮನಸ್ಸು ಉಲ್ಲಾಸಗೊಳ್ಳುತ್ತದೆ. ಸ್ನೇಹಿತರು ಮಾತ್ರವಲ್ಲ ಅಜ್ಜ-ಅಜ್ಜಿ ಸೇರಿದಂತೆ ಮಕ್ಕಳು ಇಷ್ಟಪಡುವ ಸಂಬಂಧಿಕರ ಜೊತೆ ವಿಡಿಯೋ ಕಾಲ್ ಮೂಲಕ ಮಾತನಾಡಿ.