ಕೊರೊನಾ ವೈರಸ್ ನಿಂದಾಗಿ ದೇಶದ ಆಸ್ಪತ್ರೆಗಳಲ್ಲಿ ಬೆಡ್ ಸಿಗ್ತಿಲ್ಲ. ಮೆಡಿಕಲ್ ಆಕ್ಸಿಜನ್ ಕೊರತೆ ಎದುರಾಗಿದೆ. ಆಕ್ಸಿಜನ್ ಸಿಗದೆ ಜನರು ಸಾವನ್ನಪ್ಪುತ್ತಿದ್ದಾರೆ. ಈ ಮಧ್ಯೆ ಜನರಿಗೆ ಆಕ್ಸಿಜನ್ ಮಟ್ಟ ಪರೀಕ್ಷಿಸಿಕೊಳ್ಳಲು ತಜ್ಞರು ಆರು ನಿಮಿಷಗಳ ವಾಕ್ ಟೆಸ್ಟ್ ಮಾಡುವಂತೆ ಸಲಹೆ ನೀಡ್ತಿದ್ದಾರೆ.
ಕೊರೊನಾ ವೈರಸ್ ಸೋಂಕು ನಿಮ್ಮ ಶ್ವಾಸಕೋಶದ ಮೇಲೆ ಹೇಗೆ ಪರಿಣಾಮ ಬೀರಿದೆ ಮತ್ತು ಶ್ವಾಸಕೋಶ ಸರಿಯಾಗಿ ಕೆಲಸ ಮಾಡ್ತಿದೆಯೇ ಎಂಬುದನ್ನು 6 ನಿಮಿಷಗಳ ನಡಿಗೆ ಪರೀಕ್ಷೆಯಿಂದ ಪತ್ತೆ ಮಾಡಬಹುದಾಗಿದೆ. ಮಹಾರಾಷ್ಟ್ರದ ಕೊಲ್ಹಾಪುರ ಮತ್ತು ಪುಣೆಯಲ್ಲಿ ಮನೆಯಲ್ಲಿ ಪ್ರತ್ಯೇಕದಲ್ಲಿರುವ ಕೊರೊನಾ ರೋಗಿಗಳಿಗೆ ದಿನಕ್ಕೆ ಎರಡು ಬಾರಿ ಈ 6 ನಿಮಿಷಗಳ ನಡಿಗೆ ಪರೀಕ್ಷೆಯನ್ನು ಆರೋಗ್ಯ ಇಲಾಖೆ ಕಡ್ಡಾಯಗೊಳಿಸಿದೆ.
ಕೊರೊನಾ ರೋಗಿಗಳು ಕಾಲ ಕಾಲಕ್ಕೆ ಆಕ್ಸಿಜನ್ ಮಟ್ಟವನ್ನು ಪರೀಕ್ಷೆ ಮಾಡಿಕೊಳ್ಳಬೇಕು. ಮೊದಲು ಆಕ್ಸಿಮೀಟರ್ ಮೂಲಕ ಆಕ್ಸಿಜನ್ ಮಟ್ಟವನ್ನು ಪರೀಕ್ಷೆ ಮಾಡಬೇಕು. ನಂತ್ರ ಮನೆಯ ಕೋಣೆಯಲ್ಲಿಯೇ ಆರು ನಿಮಿಷ ನಿಲ್ಲದೆ ವಾಕಿಂಗ್ ಮಾಡಬೇಕು. ನಂತ್ರ ಮತ್ತೆ ಆಕ್ಸಿಜನ್ ಮಟ್ಟವನ್ನು ಪರೀಕ್ಷೆ ಮಾಡಬೇಕು. ಆಗ ಆಕ್ಸಿಜನ್ ಮಟ್ಟ 93ಕ್ಕಿಂತ ಕಡಿಮೆ ಬರಬಾರದು. ಮೊದಲಿಗಿಂತ 3ರಷ್ಟು ಆಕ್ಸಿಜನ್ ಮಟ್ಟ ಕಡಿಮೆಯಾದಲ್ಲಿ ವೈದ್ಯರನ್ನು ಸಂಪರ್ಕಿಸಬೇಕಾಗುತ್ತದೆ.
ಸೌಮ್ಯ ಲಕ್ಷಣವುಳ್ಳವರು ಕೂಡ ಈ ಪರೀಕ್ಷೆಯನ್ನು ಮಾಡಬೇಕು. ದಿನದಲ್ಲಿ 2-3 ಬಾರಿ ಇದನ್ನು ಪರೀಕ್ಷೆ ಮಾಡಬೇಕು. ಆಮ್ಲಜನಕದ ಮಟ್ಟ ಕಡಿಮೆಯಾದ ನಂತ್ರವೂ ರೋಗಿಗೆ ಯಾವುದೇ ಲಕ್ಷಣ ಕಾಣಿಸುವುದಿಲ್ಲ. ಅಚಾನಕ್ ತೊಂದರೆ ಶುರುವಾಗುತ್ತದೆ. ಕೊರೊನಾ ಬಂದ ಐದನೇ ದಿನದಿಂದ 12ನೇ ದಿನದವರೆಗೆ ಈ ಪರೀಕ್ಷೆ ಮಾಡಬೇಕು.