ಕೊರೊನಾ ವೈರಸ್ ಸಂದರ್ಭದಲ್ಲಿ ವಿಟಮಿನ್ ಸಿ ಆಹಾರ ಸೇವನೆಗೆ ಮಹತ್ವ ನೀಡಲಾಗ್ತಿದೆ. ವಿಟಮಿನ್ ಸಿ ಹೆಚ್ಚಿರುವ ಆಹಾರ ಸೇವನೆ ಮಾಡುವುದ್ರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕೊರೊನಾ ವೈರಸ್ ನಿಂದ ಗಂಭೀರ ಪರಿಸ್ಥಿತಿಯಲ್ಲಿರುವವರು ಚೇತರಿಸಿಕೊಳ್ಳಲು ವಿಟಮಿನ್ ಸಿ ನೆರವಾಗ್ತಿದೆ. ವಿಟಮಿನ್ ಸಿಗಾಗಿ ಮಾತ್ರೆ ತೆಗೆದುಕೊಳ್ಳುವ ಬದಲು ನಮ್ಮ ಸುತ್ತಮುತ್ತಲಿರುವ ಹಣ್ಣುಗಳನ್ನು ಸೇವಿಸುವ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಜೊತೆಗೆ ಮೂಳೆಗಳನ್ನು ಬಲಪಡಿಸಲು ಇದು ನೆರವಾಗುತ್ತದೆ. ವಿಟಿಮಿನ್ ಸಿ ಹೆಚ್ಚಿರುವ ಪದಾರ್ಥಗಳಲ್ಲಿ ನೆಲ್ಲಿಕಾಯಿ ಮೊದಲ ಸ್ಥಾನದಲ್ಲಿದೆ. ನೆಲ್ಲಿಕಾಯಿಯಲ್ಲಿ ಕಿತ್ತಳೆಗಿಂತ ಶೇಕಡಾ 20ರಷ್ಟು ಹೆಚ್ಚಿನ ವಿಟಮಿನ್ ಸಿ ಅಂಶವಿರುತ್ತದೆ. ನೆಲ್ಲಿಕಾಯಿ ಸೇವನೆಯಿಂದ ಚಯಾಪಚಯ ಕ್ರಿಯೆ ಉತ್ತಮಗೊಳ್ಳುತ್ತದೆ. ಇದು ತೂಕ ಇಳಿಸಿಕೊಳ್ಳಲು ನೆರವಾಗುತ್ತದೆ. ಪ್ರತಿ ದಿನ ಒಂದು ನೆಲ್ಲಿಕಾಯಿ ಸೇವನೆ ಮಾಡಬಹುದು. ಇಲ್ಲವೆ ನೆಲ್ಲಿಕಾಯಿ ಜ್ಯೂಸ್ ಸೇವನೆ ಮಾಡಬಹುದು.
ಇನ್ನು ಹಣ್ಣಿನ ವಿಷ್ಯಕ್ಕೆ ಬರುವುದಾದ್ರೆ ಕಿತ್ತಳೆ ಹಣ್ಣು ಮೊದಲ ಸ್ಥಾನದಲ್ಲಿದೆ. ಮಧ್ಯಮ ಗಾತ್ರದ ಕಿತ್ತಳೆ ಹಣ್ಣಿನಲ್ಲಿ 53.2 ಮಿಗ್ರಾಂ ವಿಟಮಿನ್ ಸಿ ಇರುತ್ತದೆ. ಇದು ಜೀವಕೋಶಗಳು ಹಾನಿಗೊಳಗಾಗದಂತೆ ತಡೆಯುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲಪಡಿಸುತ್ತದೆ. ಶೀತದಿಂದ ದೇಹವನ್ನು ರಕ್ಷಿಸುತ್ತದೆ.
ಆರೋಗ್ಯಕರ ಲಘು ಆಹಾರದ ಬಗ್ಗೆ ಆಲೋಚನೆ ಮಾಡ್ತಿದ್ದರೆ ಕಿವಿ ಹಣ್ಣಿನ ಸೇವನೆ ಶುರು ಮಾಡಿ. ಒಂದು ಕಿವಿ ಹಣ್ಣಿನಲ್ಲಿ 83 ಮಿಗ್ರಾಂ ವಿಟಮಿನ್ ಸಿ ಅಂಶವಿರುತ್ತದೆ. ಇದ್ರಲ್ಲಿ ವಿಟಮಿನ್ ಕೆ ಮತ್ತು ವಿಟಮಿನ್ ಇ ಅಂಶವೂ ಹೆಚ್ಚಿರುತ್ತದೆ.
ಅನಾನಸ್ ಪೋಷಕಾಂಶಗಳ ಮನೆ ಎಂದು ಪರಿಗಣಿಸಲಾಗಿದೆ. ವಿಟಮಿನ್ ಸಿ ಇದ್ರಲ್ಲಿ ಹೆಚ್ಚಿನ ಪ್ರಮಾಣದಲ್ಲಿದೆ. ಮ್ಯಾಂಗನೀಸ್ ಅಂಶವೂ ಇದ್ರಲ್ಲಿದೆ. ನಿಯಮಿತವಾಗಿ ಅನಾನಸ್ ಸೇವನೆ ಮಾಡುವುದ್ರಿಂದ ಬ್ಯಾಕ್ಟೀರಿಯಾ, ಸೋಂಕಿನಿಂದ ದೇಹವನ್ನು ರಕ್ಷಿಸಬಹುದು.