ಪ್ರತಿ ದಿನವೂ ತುಳಸಿ ಗಿಡವನ್ನು ನಾವು ಪೂಜಿಸುತ್ತೇವೆ. ಪ್ರತಿ ವರ್ಷ ಉತ್ಥಾನ ದ್ವಾದಶಿಯಂದು ತುಳಸಿಯ ಪೂಜಾ ಮಹೋತ್ಸವ ಎಲ್ಲೆಡೆ ನಡೆಯುತ್ತದೆ. ಆಧ್ಯಾತ್ಮಿಕವಾಗಷ್ಟೇ ಅಲ್ಲ, ನಮ್ಮ ದೈನಂದಿನ ಜೀವನದಲ್ಲೂ ತುಳಸಿ ಗಿಡಕ್ಕೆ ತುಂಬಾ ಮಹತ್ವವಿದೆ.
ತುಳಸಿಯಲ್ಲಿ 2 ವಿಧ. ಶ್ರೀ ತುಳಸಿ, ಕೃಷ್ಣ ತುಳಸಿ. ತುಳಸಿ ಗಿಡವು ಹೆಚ್ಚು ಆಮ್ಲಜನಕವನ್ನು ಬಿಡುಗಡೆ ಮಾಡುವ ಸಸ್ಯವಾಗಿದ್ದು, ಮನೆಯ ಸುತ್ತಲೂ ಅಂಗಳದಲ್ಲಿ ತುಳಸಿ ಗಿಡವನ್ನು ಬೆಳೆಸುವುದು ಆರೋಗ್ಯ ದೃಷ್ಟಿಯಿಂದ ಉತ್ತಮ.
ಪ್ರತಿ ದಿನ 8 ರಿಂದ 10 ತುಳಸಿ ದಳಗಳನ್ನು ಬಾಯಲ್ಲಿ ಹಾಕಿ ಜಗಿದು ತಿನ್ನುವುದರಿಂದ ದೇಹದ ಆರೋಗ್ಯ ವೃದ್ಧಿಸುವುದಲ್ಲದೇ ಬಾಯಿಯ ದುರ್ವಾಸನೆ ಮಾಯವಾಗುತ್ತದೆ.
1 ಚಮಚ ತುಳಸಿ ರಸಕ್ಕೆ 1 ಚಮಚ ಜೇನು ತುಪ್ಪ ಬೆರೆಸಿ ಸೇವಿಸುವುದರಿಂದ ಗಂಟಲು ನೋವು ನಿವಾರಣೆಯಾಗುತ್ತದೆ. ತುಳಸಿ ಎಲೆಗಳನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಅದರೊಂದಿಗೆ ಅರಿಶಿನ ಬೆರೆಸಿ ಚರ್ಮಕ್ಕೆ ಲೇಪಿಸುವುದರಿಂದ ತುರಿಕೆ, ಕಜ್ಜಿ, ಬೊಬ್ಬೆ ಮುಂತಾದ ಚರ್ಮ ರೋಗಗಳು ವಾಸಿಯಾಗುತ್ತದೆ.
ತುಳಸಿ ರಸವನ್ನು ಕಿವಿಗೆ ಹಾಕುವುದರಿಂದ ಕಿವಿ ನೋವು ಕಡಿಮೆಯಾಗುತ್ತದೆ. ತುಳಸಿ ರಸದಿಂದ ಜೀರ್ಣಶಕ್ತಿ ವೃದ್ಧಿಸುವುದು. ತುಳಸಿ ರಸ, ಕರಿಮೆಣಸಿನ ಪುಡಿ ಹಾಗೂ ಜೇನುತುಪ್ಪ ಬೆರೆಸಿ ದಿನವೂ ಮೂರು ಬಾರಿ ಸೇವಿಸುವುದರಿಂದ ಜ್ವರ, ನೆಗಡಿ ದೂರವಾಗುತ್ತದೆ.