ಉರಿ ಬಿಸಿಲಿಗೆ ಜನರು ಬಸವಳಿದಿದ್ದಾರೆ. ಬಿಸಿಲ ಝಳ ಜಾಸ್ತಿಯಾಗಿದ್ದು, ದಾಖಲೆ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದು ಒಂದು ಸವಾಲಿನ ಕೆಲಸವಾಗಿದ್ದು, ಅನೇಕ ಖಾಯಿಲೆಗಳಿಂದ ಜನರು ಬಳಲುತ್ತಿದ್ದಾರೆ.
ಅತಿ ಉಷ್ಣ ಪ್ರದೇಶದಲ್ಲಿ ವಾಸ ಮಾಡುವುದರಿಂದ ದೇಹದ ಉಷ್ಣತೆ ಹೆಚ್ಚಾಗುತ್ತದೆ. ರಕ್ತದೊತ್ತಡ ಹೆಚ್ಚಾಗಿ ಹೃದಯ ಸಂಬಂಧಿ ಖಾಯಿಲೆಗಳು ಕಾಡುತ್ತವೆ. ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವುದರಿಂದ ಡಿಹೈಡ್ರೈಶನ್ ಸಮಸ್ಯೆ ಕಾಣಿಸಿಕೊಳ್ಳಲಿದೆ. ಇದ್ರಿಂದ ವಾಕರಿಕೆ, ತಲೆಸುತ್ತು, ತಲೆನೋವು ಹೆಚ್ಚಾಗುತ್ತದೆ. ಸಾಂಕ್ರಾಮಿಕ ರೋಗಗಳ ಸಂಖ್ಯೆ ಕೂಡ ಹೆಚ್ಚುತ್ತದೆ. ದಡಾರ, ಜಾಂಡೀಸ್, ಚಿಕನ್ ಫಾಕ್ಸ್ ಕಾಡುತ್ತದೆ. ಮಾನಸಿಕ ಒತ್ತಡ ಹೆಚ್ಚಾಗುತ್ತದೆ. ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇದೆ.
ಮನೆಯಿಂದ ಹೊರಗಿರುವವರು ಮಾತ್ರ ಈ ಸಮಸ್ಯೆಗೆ ತುತ್ತಾಗುವುದಿಲ್ಲ. ಮನೆಯಲ್ಲಿರುವ ಮಕ್ಕಳು, ಹಿರಿ ಜೀವಗಳನ್ನೂ ಈ ಸಮಸ್ಯೆ ಕಾಡುತ್ತದೆ. ಬೇಸಿಗೆಯಲ್ಲಿ ಸೊಳ್ಳೆಗಳು ಹೆಚ್ಚಾಗುವುದರಿಂದ ಮಲೇರಿಯಾ, ಡೆಂಗ್ಯೂ, ಚಿಕನ್ ಗುನ್ಯಾಕ್ಕೆ ಕಾರಣವಾಗುವ ವೈರಸ್ ಹರಡುತ್ತದೆ.
ಈ ಸಮಯದಲ್ಲಿ ನಿಮ್ಮ ತಿಂಡಿ ಹಾಗೂ ದಿನಚರಿಯಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಮುಖ್ಯ. ಆದಷ್ಟು ಸಮಯವನ್ನು ಮನೆಯೊಳಗೆ ಕಳೆಯಿರಿ. ಬೆಳಿಗ್ಗೆ 11 ರಿಂದ ನಾಲ್ಕು ಗಂಟೆಯವರೆಗೆ ಸೂರ್ಯನ ಶಾಖ ತಗಲುವ ಸ್ಥಳಕ್ಕೆ ಹೋಗಬೇಡಿ.
ಎಸಿ ಅಥವಾ ಕೂಲರ್ ಬಳಸಿ. ಸದಾ ದೇಹ ತಂಪಾಗಿರುವಂತೆ ನೋಡಿಕೊಳ್ಳಿ. ಮನೆಯಿಂದ ಹೊರಗೆ ಹೋಗುವಾಗ ಕ್ಯಾಪ್ ಧರಿಸಿ. ಸಾಕಷ್ಟು ಹಣ್ಣಿನ ರಸ ಕುಡಿಯಿರಿ, ಎಳನೀರು ಹಾಗೆ ಮಜ್ಜಿಗೆ ಸೇವನೆ ಮಾಡಿ. ಸಡಿಲವಾದ ಬಟ್ಟೆಯನ್ನು ಧರಿಸಿ. ಕಂಡ ಕಂಡಲ್ಲಿ ನೀರು ಕುಡಿಯಬೇಡಿ. ಕಾದು ಆರಿದ ನೀರಿನ ಸೇವನೆ ಒಳ್ಳೆಯದು.