ಆರೋಗ್ಯವಾಗಿದ್ದರೆ ತಾನೆ ಏನಾದರೂ ಕೆಲಸ ಮಾಡಲು, ಸಾಧಿಸಲು ಸಾಧ್ಯವಾಗುವುದು. ಯಾರಿಗೆ ತಾನೆ ಕಾಯಿಲೆ ಬೀಳಲು ಇಷ್ಟ ಹೇಳಿ? ಕಾಯಿಲೆ ಬಂದ ಮೇಲೆ ಚಿಕಿತ್ಸೆ ತೆಗೆದುಕೊಳ್ಳುವುದಕ್ಕಿಂತ ಅ ಕಾಯಿಲೆ ಬರದಂತೆ ಮೊದಲೇ ಜಾಗ್ರತೆ ವಹಿಸುವುದು ಒಳ್ಳೆಯದು.
ನಾವು ಮೊದಲೇ ಜಾಗ್ರತೆ ವಹಿಸಿ ಕೆಲವು ಹೆಜ್ಜೆಗಳನ್ನು ತೆಗೆದುಕೊಳ್ಳುವುದಾದರೆ, ಅನೇಕ ಕಾಯಿಲೆಗಳಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಬಹುದು. ಅಂತಹ 5 ಹೆಜ್ಜೆಗಳು ಇಲ್ಲಿವೆ ನೋಡಿ.
ಶುದ್ದತೆ ಕಾಪಾಡಿಕೊಳ್ಳಿ: ನಮ್ಮನ್ನು ನಾವು ಶುದ್ಧವಾಗಿಟ್ಟುಕೊಳ್ಳಬೇಕು. ಪ್ರತಿ ದಿನ ಸ್ನಾನ ಮಾಡಿ ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಶೌಚಾಲಯಕ್ಕೆ ಹೋಗಿ ಬಂದ ನಂತರ ಕೈಯನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು. ಆಹಾರವನ್ನು ತಯಾರಿಸುವ, ಬಡಿಸುವ ಮತ್ತು ತಿನ್ನುವ ಮುಂಚೆ ಕೈ ತೊಳೆದುಕೊಳ್ಳಬೇಕು.
ಶುದ್ದ ನೀರನ್ನು ಬಳಸಿ: ನೀವು ಉಪಯೋಗಿಸುವ ನೀರು ಸುರಕ್ಷಿತ ಮೂಲದಿಂದ ಬರುತ್ತಿದೆಯೋ ಎಂದು ಖಚಿತ ಪಡಿಸಿಕೊಳ್ಳಿ. ಹಾಗೆಯೇ ಕುಡಿಯುವ ನೀರು ಶುದ್ಧವಾಗಿರಬೇಕು.
ಪೌಷ್ಠಿಕ ಆಹಾರ ಸೇವಿಸಿ: ಒಳ್ಳೆಯ ಆರೋಗ್ಯಕ್ಕಾಗಿ ಎಲ್ಲಾ ರೀತಿಯ ಪೌಷ್ಠಿಕ ಆಹಾರ ಸೇವಿಸಿ. ತರಕಾರಿಗಳನ್ನು ಔಷಧ, ಗೊಬ್ಬರ ಬಳಸಿ ಬೆಳೆಯುತ್ತಾರೆ. ಆದ್ದರಿಂದ ತರಕಾರಿಗಳನ್ನು ಉಪಯೋಗಿಸುವಾಗ ಚೆನ್ನಾಗಿ ತೊಳೆಯಿರಿ. ಆಹಾರ ತಯಾರಿಸುವ, ಹೆಚ್ಚುವ ಪರಿಕರಗಳನ್ನು ಶುದ್ಧವಾಗಿಟ್ಟುಕೊಳ್ಳಿ. ಉಪ್ಪು, ಸಕ್ಕರೆ, ಕೊಬ್ಬಿನ ಅಂಶ ಅಧಿಕವಾಗಿರುವ ಪದಾರ್ಥಗಳ ಆಧಿಕ ಸೇವನೆ ಬೇಡ.
ವ್ಯಾಯಾಮ ಮಾಡಿ: ಎಲ್ಲಾ ವಯಸ್ಸಿನವರಿಗೂ ವ್ಯಾಯಾಮ ಅತ್ಯಗತ್ಯ. ವ್ಯಾಯಾಮ ಮಾಡುವುದರಿಂದ ಚೆನ್ನಾಗಿ ನಿದ್ದೆ ಬರುತ್ತದೆ. ಮೂಳೆ, ಮಾಂಸ ಖಂಡ ಗಟ್ಟಿಯಾಗುತ್ತವೆ. ದೇಹದ ತೂಕವನ್ನು ಸಮತೋಲನದಲ್ಲಿ ಇಡಬಹುದಾಗಿದೆ.
ಸಾಕಷ್ಟು ನಿದ್ದೆ ಮಾಡಿ: ನಿದ್ದೆ ಮಾಡುವುದು ಸಹ ಮಾನಸಿಕ, ದೈಹಿಕ ಆರೋಗ್ಯಕ್ಕೆ ಬಹು ಮುಖ್ಯ. ನಿದ್ದೆ ಮಾಡುವ ಸಮಯ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ರಾತ್ರಿ ಆದಷ್ಟು ಬೇಗ ಮಲಗಿ ಬೆಳಿಗ್ಗೆ ಬೇಗ ಏಳುವ ಅಭ್ಯಾಸ ಮಾಡಿಕೊಳ್ಳಿ. ಮಲಗುವ ಕೋಣೆ ಪ್ರಶಾಂತವಾಗಿರುವಂತೆ ನೋಡಿಕೊಳ್ಳಿ. ಟಿ.ವಿ. ನೋಡುತ್ತ ಮಲಗುವುದು, ಮೊಬೈಲ್ ಉಪಯೋಗಿಸುವುದು ಮಾಡಬೇಡಿ. ಮಕ್ಕಳು 8-10 ಗಂಟೆ, ವಯಸ್ಕರು 7-8 ಗಂಟೆ ನಿದ್ದೆ ಮಾಡುವುದು ಆರೋಗ್ಯಕ್ಕೆ ಒಳ್ಳೆಯದು.