ದಿನನಿತ್ಯ ಅಡುಗೆ ಮನೆಯಲ್ಲಿ ಬಳಕೆಯಾಗುವ ಬೆಳ್ಳುಳ್ಳಿ ಹಲವು ಖಾಯಿಲೆಗಳ ಶಮನಕ್ಕೆ ಬಳಕೆಯಾಗುತ್ತದೆ. ಅದರ ಕೆಲವು ಔಷಧೀಯ ಗುಣಧರ್ಮಗಳು ಇಂತಿವೆ.
ಒಂದು ಟೀ ಚಮಚ ಬೆಳ್ಳುಳ್ಳಿಯ ರಸವನ್ನು ಅಷ್ಟೇ ಪ್ರಮಾಣದ ಜೇನು ತುಪ್ಪದೊಡನೆ ತೆಗೆದುಕೊಳ್ಳುವುದರಿಂದ ಜಂತು ಹುಳುಗಳು ಮಲದ ಮೂಲಕ ಹೊರಬೀಳುತ್ತವೆ.
ಉಬ್ಬಸ ರೋಗಿಗಳು ಹಾಲಿನಲ್ಲಿ ಬೇಯಿಸಿದ ಮೂರು ಬೆಳ್ಳುಳ್ಳಿ ತೊಳೆಗಳನ್ನು ಪ್ರತಿದಿನ ತಿನ್ನುವುದರಿಂದ ರೋಗ ನಿಯಂತ್ರಣಕ್ಕೆ ಬರುತ್ತದೆ.
ಬೆಳ್ಳುಳ್ಳಿಯಲ್ಲಿ ಉತ್ತಮ ಜೀರ್ಣಕಾರಿ ಅಂಶವಿದೆ. ಇದು ದೇಹವನ್ನು ಶಾಖವಾಗಿಡುತ್ತದೆ.
ಬೆಳ್ಳುಳ್ಳಿಯನ್ನು ಅರೆದು ಚೇಳು ಕುಟುಕಿದ ಜಾಗಕ್ಕೆ ಹಚ್ಚಿದರೆ ಶೀಘ್ರವಾಗಿ ಗುಣವಾಗುತ್ತದೆ.
ಅಜೀರ್ಣ ಮುಂತಾದ ಹೊಟ್ಟೆ ತೊಂದರೆಯಾದಾಗ ಬೆಳ್ಳುಳ್ಳಿಯನ್ನು ಬೂದಿಯಲ್ಲಿ ಸುಟ್ಟು ತಿನ್ನಬೇಕು.
ಮುಟ್ಟಿನ ದೋಷದಿಂದ ಹೊಟ್ಟೆ ನೋವಾದಲ್ಲಿ ಬೆಳ್ಳುಳ್ಳಿ ಬೇಯಿಸಿದ ನೀರನ್ನು ದಿನಕ್ಕೆ 3 ಬಾರಿ ಕುಡಿಯಬೇಕು.
ಬೆಳ್ಳುಳ್ಳಿ ನೀರಿನಲ್ಲಿ ಗಾಯವನ್ನು ತೊಳೆದರೆ ರೋಗಾಣುವಿನ ನಾಶ ಸಾಧ್ಯ.
ಕಿವಿ ನೋವಾದಾಗ ಬೆಳ್ಳುಳ್ಳಿಯ ತೊಳೆಯನ್ನು ಒಂದು ಚಮಚ ಕೊಬ್ಬರಿ ಎಣ್ಣೆಯಲ್ಲಿ ಕರಿದು ಆ ಎಣ್ಣೆಯನ್ನು ಕಿವಿಗೆ ಬಿಡಬೇಕು.