ದೀಪಾವಳಿ ಸಂತೋಷಗಳನ್ನು ಹೊತ್ತು ತರುತ್ತದೆ. ಬೆಳಕಿನ ಹಬ್ಬದಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಆದ್ರೆ ಈ ಹಬ್ಬ ಅಸ್ತಮಾ, ಅಲರ್ಜಿ, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುವವರ ಆರೋಗ್ಯದಲ್ಲಿ ಏರುಪೇರು ಮಾಡುತ್ತದೆ. ಪಟಾಕಿಯ ಸಣ್ಣ ಕಣಗಳು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತವೆ. ಹಾಗಾಗಿ ಕೆಲವೊಂದು ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಉತ್ತಮ.
ಶ್ವಾಸಕೋಶದ ಸಮಸ್ಯೆಯಿರುವವರು, ಅಸ್ತಮಾದಿಂದ ಬಳಲುತ್ತಿರುವವರಿಗೆ ಪಟಾಕಿ ಹೊಗೆ ಆಗುವುದಿಲ್ಲ. ಹೊಗೆ ದೇಹ ಸೇರುತ್ತಿದ್ದಂತೆ ಉಸಿರಾಟಕ್ಕೆ ಸಮಸ್ಯೆಯಾಗುತ್ತದೆ. ಕೆಲವರ ಪ್ರಾಣಕ್ಕೆ ಕುತ್ತು ಬರಬಹುದು. ಹಾಗಾಗಿ ಅಸ್ತಮಾ ರೋಗಿಗಳು ಪಟಾಕಿ ಸಿಡಿಸುವ ಜಾಗಕ್ಕೆ ಹೋಗದಿರುವುದು ಒಳ್ಳೆಯದು.
ಪಟಾಕಿಯಲ್ಲಿರುವ ಕೆಮಿಕಲ್ ಹೃದಯಾಘಾತ ಹಾಗೂ ಸ್ಟ್ರೋಕ್ ಗೆ ಕಾರಣವಾಗಬಹುದು. ಪಟಾಕಿ ಹೊಗೆ ಉಸಿರಾಟದ ಮೂಲಕ ದೇಹ ಸೇರಿದಾಗ ರಕ್ತ ಸಂಚಾರ ನಿಧಾನವಾಗುತ್ತದೆ. ಮೆದುಳಿಗೆ ಸಾಕಷ್ಟು ಪ್ರಮಾಣದಲ್ಲಿ ರಕ್ತ ಸಂಚಾರವಾಗದೆ ಹೋದಾಗ ಸ್ಟ್ರೋಕ್ ಕಾಣಿಸಿಕೊಳ್ಳುತ್ತದೆ.
ಚಿಕ್ಕ ಮಕ್ಕಳು, ವೃದ್ಧರು ಹಾಗೂ ರೋಗಿಗಳು ಪಟಾಕಿ ಸ್ಥಳದಿಂದ ದೂರವಿರುವುದು ಒಳ್ಳೆಯದು. ಪಟಾಕಿ ಹೊಗೆ ಶ್ವಾಸಕೋಶವನ್ನು ದುರ್ಬಲಗೊಳಿಸುತ್ತದೆ. ಪಟಾಕಿ ಶಬ್ಧ ಮಕ್ಕಳನ್ನು ಹೆದರಿಸಿದ್ರೆ ವಯಸ್ಸಾದವರಿಗೆ ಹೃದಯಾಘಾತವಾಗುವ ಸಾಧ್ಯತೆಯಿರುತ್ತದೆ.
ಪಟಾಕಿಯಿಂದ ವಾಯು ಮಾಲಿನ್ಯ ಹಾಗೂ ಶಬ್ಧ ಮಾಲಿನ್ಯವಾಗುತ್ತದೆ. ಪಟಾಕಿ ಹೊಗೆ ಉಸಿರಾಟದ ಮೂಲಕ ದೇಹ ಸೇರುತ್ತದೆ. ಪಟಾಕಿಯಿಂದ ದೂರವಿದ್ರೂ ಕಲುಷಿತ ವಾತಾವರಣ ನಮ್ಮ ಆರೋಗ್ಯದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಹಬ್ಬದ ಸಂದರ್ಭದಲ್ಲಿ ಮನೆಯಿಂದ ಹೊರ ಬೀಳುವ ಮೊದಲು ಮುಖಕ್ಕೆ ಮಾಸ್ಕ್ ಧರಿಸಿ.