ಕೊರೊನಾ ವೈರಸ್ ಎರಡನೇ ಅಲೆ ವೇಗವಾಗಿ ಹರಡುತ್ತಿದೆ. ಯಾವುದೇ ಸಾಂಕ್ರಾಮಿಕ ರೋಗದ ಎರಡನೇ ಅಲೆ ಮಾರಕವಾಗಿರುತ್ತದೆ. ಕೊರೊನಾದ ಎರಡನೇ ಅಲೆ ಗರ್ಭಿಣಿಯರಿಗೂ ಅಪಾಯಕಾರಿಯಾಗಿದೆ. ಗರ್ಭಿಣಿಯರು ತಮ್ಮ ಜೊತೆ ಹೊಟ್ಟೆಯಲ್ಲಿರುವ ಮಗುವಿನ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಈ ಸಂದರ್ಭದಲ್ಲಿ ಹಾರ್ಮೋನುಗಳ ಬದಲಾವಣೆಯಿಂದ ಸೋಂಕು, ಜ್ವರ ಬೇಗ ಗರ್ಭಿಣಿಯರಿಗೆ ಕಾಣಿಸಿಕೊಳ್ಳುತ್ತದೆ.
ಮೊದಲ ಮೂರು ತಿಂಗಳಲ್ಲಿ ಕೊರೊನಾ ಕಾಣಿಸಿಕೊಂಡಲ್ಲಿ ಗರ್ಭಪಾತದ ಅಪಾಯವಿದೆ. ಮಧುಮೇಹ, ಅಧಿಕ ರಕ್ತದೊತ್ತಡ, ಅಧಿಕ ತೂಕ ಹೊಂದಿರುವ ಗರ್ಭಿಣಿಯರಿಗೆ ಸಮಸ್ಯೆ ಹೆಚ್ಚು. ಅವರನ್ನು ಐಸಿಯುವಿನಲ್ಲಿ ದಾಖಲಿಸುವ ಸ್ಥಿತಿ ನಿರ್ಮಾಣವಾಗಬಹುದು. ಕೊರೊನಾ ಸೋಂಕು ಹೆಚ್ಚಾಗಿದ್ದಲ್ಲಿ ವೈದ್ಯರು ಸಿಸೇರಿಯನ್ ಸಲಹೆ ನೀಡುತ್ತಾರೆ.
ಗರ್ಭಿಣಿಯರು ಕೊರೊನಾ ಬರದಂತೆ ನೋಡಿಕೊಳ್ಳುವುದು ಬಹಳ ಮುಖ್ಯ. ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. 20 ಸೆಕೆಂಡುಗಳ ಕಾಲ ಕೈಗಳನ್ನು ಸ್ವಚ್ಛವಾಗಿ ತೊಳೆಯಿರಿ. ಮನೆಯಿಂದ ಹೊರ ಹೋಗುವಾಗ ಮಾಸ್ಕ್ ಧರಿಸಿ. ಮನೆಯಲ್ಲಿ ಎರಡು ಬಾರಿ ನೀರಿಗೆ ಉಪ್ಪು ಬೆರೆಸಿ ಗಾರ್ಗಲ್ ಮಾಡಿ. ವೈದ್ಯರ ಸಲಹೆ ಪಡೆದು ವಿಟಮಿನ್ ಸಿ ಮಾತ್ರೆ ಸೇವನೆ ಮಾಡಿ. ಸಮತೋಲಿತ ಆಹಾರವನ್ನು ಸೇವನೆ ಮಾಡಿ. ಕೊರೊನಾ ಲಸಿಕೆಯನ್ನು ವೈದ್ಯರ ಸಲಹೆ ಮೇರೆಗೆ ತೆಗೆದುಕೊಳ್ಳಿ. ನೀರನ್ನು ಸಾಧ್ಯವಾದಷ್ಟು ಹೆಚ್ಚಿನ ಪ್ರಮಾಣದಲ್ಲಿ ಸೇವನೆ ಮಾಡಿ.
ಕೈಗಳಿಂದ ಮೂಗು, ಬಾಯಿ, ಮುಖವನ್ನು ಮುಟ್ಟಬೇಡಿ. ಮನೆಯಿಂದ ಹೊರ ಬರಬೇಡಿ. ಸಂಬಂಧಿಕರು, ಕೆಲಸದವರು ಮನೆಗೆ ಬರದಂತೆ ನೋಡಿಕೊಳ್ಳಿ. ತುರ್ತು ಪರಿಸ್ಥಿತಿಯಿಲ್ಲವೆಂದಾದಲ್ಲಿ ಆಸ್ಪತ್ರೆಗೆ ಹೋಗಬೇಡಿ. ನಕಾರಾತ್ಮಕ ಸುದ್ದಿಗಳ ವೀಕ್ಷಣೆ ಮಾಡಬೇಡಿ. ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಗುವ ತಪ್ಪು ಮಾಹಿತಿಯನ್ನು ನಂಬಬೇಡಿ.