ಕೊರೊನಾ ಸೋಂಕು ಒಂದು ಕಡೆ ಹೆಚ್ಚಾಗ್ತಿದೆ. ಇನ್ನೊಂದು ಕಡೆ ಕೊರೊನಾ ಗೆದ್ದು ಬರುವವರ ಸಂಖ್ಯೆಯೂ ಹೆಚ್ಚಿದೆ. ಕೊರೊನಾ ಗೆದ್ದು ಮನೆಗೆ ಬರುವ ವ್ಯಕ್ತಿಗಳು ಸಂಪೂರ್ಣ ಗುಣಮುಖರಾಗಿದ್ದಾರಾ ಎಂಬ ಪ್ರಶ್ನೆ ಎದ್ದಿದೆ. ಕೊರೊನಾ ನಂತ್ರ ಜನರಿಗೆ ಹೊಸ ಹೊಸ ಸಮಸ್ಯೆ ಕಾಡಲು ಶುರುವಾಗಿದೆ. ಕೊರೊನಾದಿಂದ ಗುಣಮುಖರಾದ ನಂತ್ರ ಕೆಲ ಲಕ್ಷಣಗಳು ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿಯಾಗಿ.
ಕೊರೊನಾ ಸಂದರ್ಭದಲ್ಲಿ ವಾಸನೆ, ರುಚಿ ಹೋಗುವುದು ಸಾಮಾನ್ಯ. ರುಚಿ ಹೋದ ಕಾರಣ ಸರಿಯಾಗಿ ಊಟ ಮಾಡಲು ಆಗುವುದಿಲ್ಲ. ಆದ್ರೆ ಕೊರೊನಾ ನೆಗೆಟಿವ್ ಬಂದು ಬಾಯಿ ರುಚಿ ಬಂದ್ಮೇಲೆ ಹೆಚ್ಚು ಹಸಿವಾಗುತ್ತದೆ. ಒಂದೆರಡು ದಿನ ಹೆಚ್ಚು ಹಸಿವಾಗುವುದು ಸಾಮಾನ್ಯ. ಆದ್ರೆ ಅತಿ ಹಸಿವು ಮುಂದುವರೆದರೆ ಅದು ಮಧುಮೇಹದ ಲಕ್ಷಣವಾಗಿರಬಹುದು. ಇದ್ರ ಬಗ್ಗೆ ಗಮನವಿರಲಿ.
ಕೊರೊನಾ ವೈರಸ್ ವಿರುದ್ಧ ದೇಹ ಹೋರಾಡುವುದ್ರಿಂದ ಅದಕ್ಕೆ ಸುಸ್ತಾಗುತ್ತದೆ. ಚೇತರಿಕೆ ವೇಳೆ ಹಸಿವಾಗುತ್ತದೆ. ಕೊರೊನಾದ ಕಡಿಮೆ ಅಥವಾ ಯಾವುದೇ ಲಕ್ಷಣಗಳಿಲ್ಲದ ರೋಗಿಗಳು ಹೆಚ್ಚಿದ ಹಸಿವನ್ನು ಅನುಭವಿಸುತ್ತಿದ್ದಾರೆ. ಕೊರೊನಾದಿಂದ ತೀವ್ರವಾಗಿ ಬಳಲುವ ರೋಗಿಗಳಿಗೆ ಹಸಿವಿನ ಲಕ್ಷಣ ಕಂಡು ಬಂದಿಲ್ಲವೆಂದು ವೈದ್ಯರು ಹೇಳಿದ್ದಾರೆ.
ಹಸಿವಾಗಿದೆ ಎನ್ನುವ ಕಾರಣಕ್ಕೆ ಬೇಕಾಬಿಟ್ಟಿ ತಿನ್ನುವುದು ಸರಿಯಲ್ಲ. ವೈದ್ಯರ ಸಲಹೆ ಮೇರೆಗೆ ಡಯಟ್ ಪ್ಲಾನ್ ಮಾಡಿ ಆಹಾರ ಸೇವನೆ ಮಾಡಬೇಕು. ಕೊರೊನಾದಿಂದ ಚೇತರಿಸಿಕೊಂಡ ನಂತ್ರ ಮೊದಲಿಗಿಂತ ಹೆಚ್ಚು ಹಸಿವಾಗುವುದು, ನಿರಂತರ ಹಸಿವು ಕಾಣಿಸಿಕೊಂಡಲ್ಲಿ ವೈದ್ಯರನ್ನು ಭೇಟಿಯಾಗಿ. ಇವು ಬೊಜ್ಜು ಮತ್ತು ಯಕೃತ್ತಿಗೆ ಸಂಬಂಧಿಸಿದ ಖಾಯಿಲೆಗೆ ಕಾರಣವಾಗಬಹುದು.
ಕೊರೊನಾದಿಂದ ಚೇತರಿಸಿಕೊಂಡ ನಂತ್ರ ಲಘು ಆಹಾರ ಸೇವನೆ ಮಾಡಬೇಕು. ಹೆಚ್ಚಿನ ಪ್ರೋಟೀನ್ ಹಾಗೂ ಫೈಬರ್ ಅಂಶ ಅದರಲ್ಲಿರಬೇಕು. ದ್ವಿದಳ ಧಾನ್ಯ ಹಾಗೂ ಮೊಳಕೆ ಕಾಳುಗಳನ್ನು ಹೆಚ್ಚಾಗಿ ಸೇವನೆ ಮಾಡಿ. ರೊಟ್ಟಿ- ಅಕ್ಕಿಯ ಆಹಾರ ಸೇವನೆ ಮಾಡಬೇಕು. ಹಣ್ಣು ಹಾಗೂ ತರಕಾರಿ ಸೇವನೆ ಮಾಡಬಹುದು.