ದೊಡ್ಡ ಪತ್ರೆ ಎಲೆ ಅಥವಾ ಸಾಮ್ರಾಣಿ ಎಲೆಗಳಿಂದ ಹಲವು ಪ್ರಯೋಜನಗಳಿವೆ. ಮಕ್ಕಳಿಗೆ ಕಾಡುವ ಸಾಮಾನ್ಯ ಶೀತದಿಂದ ಆರಂಭಿಸಿ, ವೃದ್ಧರಿಗೆ ಕಾಡುವ ಅಸ್ತಮಾ ರೋಗದ ತನಕ ಹಲವು ರೋಗಗಳಿಗೆ ಸಾಮ್ರಾಣಿ ಎಲೆಯಲ್ಲಿ ಔಷಧವಿದೆ.
ಇದರ ಎಲೆಯನ್ನು ಬಾಡಿಸಿ, ರಸ ಹಿಂಡಿ ಜೇನುತುಪ್ಪ ಬೆರೆಸಿ ಮಕ್ಕಳಿಗೆ ಕುಡಿಸಿದರೆ ಸಾಮಾನ್ಯ ಶೀತ ಕೆಮ್ಮು ಸಮಸ್ಯೆ ದೂರವಾಗುತ್ತದೆ. ದಿನಕ್ಕೆ ಮೂರು ಬಾರಿ ಹೀಗೆ ಮಾಡಿ ಕುಡಿದರೆ ದೊಡ್ಡವರ ನೆಗಡಿ ಸಮಸ್ಯೆಯೂ ಇಲ್ಲವಾಗುತ್ತದೆ.
ಇದರಲ್ಲಿ ವಿಟಮಿನ್ ಎ ಮತ್ತು ಸಿ ಪ್ರಮಾಣ ಧಾರಾಳವಾಗಿರುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಬಾಣಂತಿಯರಲ್ಲಿ ಎದೆಹಾಲು ಹೆಚ್ಚಿಸುತ್ತದೆ.
ಋತುಮಾನದ ಬದಲಾವಣೆಯಿಂದ ಕಾಡುವ ಮತ್ತು ಹರಡುವ ಸೋಂಕುಗಳನ್ನು ತಡೆಯಲು ಇದನ್ನು ಅಡುಗೆ ಮನೆಯಲ್ಲೂ ಬಳಸಬಹುದು. ಇದಕ್ಕೆ ತೆಂಗಿನ ತುರಿ, ಹುಣಸೆ ಹುಳಿ ಮತ್ತು ಕಾಯಿಮೆಣಸು ಸೇರಿಸಿ ಚಟ್ನಿ ತಯಾರಿಸಿ ದೋಸೆಯೊಂದಿಗೆ ಸವಿಯಬಹುದು.
ಅಕ್ಕಿ ಹಾಗೂ ತೆಂಗಿನತುರಿಯೊಂದಿಗೆ ಈ ಎಲೆಗಳನ್ನು ಕಡೆದು ದೋಸೆ ತಯಾರಿಸಬಹುದು. ತೆಂಗಿನಕಾಯಿಯೊಂದಿಗೆ ಮೊಸರು ಬೆರೆಸಿ ರುಬ್ಬಿ ತಂಬುಳಿಯನ್ನೂ ತಯಾರಿಸಬಹುದು, ಹಾಗಾದರೆ ಮತ್ತೇಕೆ ತಡ, ಇದೇ ಹೊಸ ರುಚಿ ಸವಿದು ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಸಿಕೊಳ್ಳಿ.